ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆ ದುರ್ಬಲಗೊಳಿಸಿದ ಮೋದಿ: ಎಚ್‌.ಆಂಜನೇಯ

ಗೊಡಬನಾಳ್ ಗ್ರಾಮದಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ ಆರೋಪ
Last Updated 10 ಅಕ್ಟೋಬರ್ 2021, 15:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಕಟ್ಟಿದ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹಾಳು ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಉದ್ಯಮವನ್ನು ಮಾರಾಟ ಮಾಡಿ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆರೋಪಿಸಿದರು.

ತಾಲ್ಲೂಕಿನ ಗೊಡಬನಾಳ್ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಸಭೆಯಲ್ಲಿ ಅವರು ಮಾತನಾಡಿದರು.

‘ಏರ್‌ ಇಂಡಿಯಾವನ್ನು ಟಾಟಾಗೆ ಮಾರಾಟ ಮಾಡಲಾಗಿದೆ. ಮಂಗಳೂರಿನ ವಿಮಾನ ನಿಲ್ದಾಣವನ್ನು ಅದಾನಿ–ಅಂಬಾನಿಗೆ ಅಡ ಇಡಲಾಗಿದೆ. ಎಲ್‌ಐಸಿ, ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಎಚ್‌ಎಎಲ್‌ ಸೇರಿದಂತೆ ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ದೂರಿದರು.

‘ಶ್ರೀಮಂತರ ಹಿಡಿಯತದಲ್ಲಿದ್ದ ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಬಡವರು ಮತ್ತು ರೈತರಿಗೆ ಸೇವೆ ನೀಡಲು ಸಾಧ್ಯವಿಲ್ಲ ಎಂಬುದು ಇಂದಿರಾ ಗಾಂಧಿ ಅವರಿಗೆ ಅರ್ಥವಾಗಿತ್ತು. ಹೀಗಾಗಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಸರ್ಕಾರಿ ಸ್ವಾಮ್ಯಕ್ಕೆ ಪಡೆದರು. ಇದೇ ಬ್ಯಾಂಕುಗಳನ್ನು ಪ್ರಧಾನಿ ಮೋದಿ ಖಾಸಗೀಕರಣ ಮಾಡುತ್ತಿದ್ದಾರೆ. ಜಲಾಶಯ, ವಿದ್ಯುತ್‌ ಸ್ಥಾವರ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳನ್ನು ಕಾಂಗ್ರೆಸ್‌ ನಿರ್ಮಿಸಿದೆ. ನಿಮ್ಮ ಅಧಿಕಾರವಧಿಯಲ್ಲೇ ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

‘ಇಂಧನದ ಬೆಲೆ ನಿತ್ಯವೂ ಏರಿಕೆಯಾಗುತ್ತಿದೆ. ₹ 400 ಇದ್ದ ಅಡುಗೆ ಅನಿಲದ ಬೆಲೆ ಸಾವಿರ ಸಮೀಪಕ್ಕೆ ಸಾಗಿದೆ. ಬಡವರು ಅಡುಗೆ ಅನಿಲಕ್ಕೆ ಹಣ ಖರ್ಚು ಮಾಡಲು ಸಾಧ್ಯವಾಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತೆ ಉರುವಲು ಬಳಸಲು ಜನರು ಮುಂದಾಗುತ್ತಿದ್ದಾರೆ. ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ₹ 100 ದಾಟಿದೆ. ಬೆಲೆ ಏರಿಕೆಯ ಬಿಸಿಯಲ್ಲಿ ಜನರು ಹೈರಾಣಾಗಿದ್ದಾರೆ’ ಎಂದು ಹೇಳಿದರು.

‘ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದರುವ ರೈತರೊಂದಿಗೆ ಪ್ರಧಾನಿ ಈವರೆಗೆ ಮಾತುಕತೆ ನಡೆಸಿಲ್ಲ. ಉತ್ತರಪ್ರದೇಶದ ರೈತರ ಮೇಲೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ರೈತರ ಸ್ಥಿತಿ ಹದಗೆಡುತ್ತಿದೆ. ಯಾವ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುವ ರೈತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ’ ಎಂದು ಕಿಡಿಕಾರಿದರು.

‘ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಎದ್ದಿದೆ. ದೇಶವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಾಗಿ ನಂಬಿಸಿ ಬಿಜೆಪಿ ಮೋಸ ಮಾಡುತ್ತಿದೆ. ಉದ್ಯೋಗ ಕೇಳಿದ ಪದವೀಧರರಿಗೆ ಪಕೋಡಾ ಮಾರಾಟ ಮಾಡಲು ಹೇಳಿ ಅವಮಾನಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗೆ ಪಾಠ ಕಲಿಸಲು ಮತದಾರರು ಕಾಯುತ್ತಿದ್ದಾರೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಾಜಿ ಅಧ್ಯಕ್ಷ ಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌, ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ಲಿಡ್ಕರ್ ಮಾಜಿ‌ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜು, ಮಹಡಿ ಶಿವಮೂರ್ತಿ ಇದ್ದರು.

ಮುನಿಸು ಮರೆತು ಒಗ್ಗೂಡಿದರು

ಹಿರೇಗುಂಟನೂರು ಗ್ರಾಮದಲ್ಲಿ ನಡೆದ ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದ ಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ಅವರು ಮುನಿಸು ಮರೆತು ಒಗ್ಗೂಡಿದರು.

ಗೊಡಬನಾಳ್‌ ಗ್ರಾಮದ ಸಭೆಯಲ್ಲಿ ಅಭಿಮಾನಿಗಳು ಇಬ್ಬರಿಗೂ ಹೂಹಾರ ಹಾಕಿದರು. ವೇದಿಕೆಯಲ್ಲಿ ಅಕ್ಕ–ಪಕ್ಕದಲ್ಲಿ ಕುಳಿತು ಗಮನ ಸೆಳೆದರು. ಇಬ್ಬರು ಒಗ್ಗೂಡಿರುವುದಕ್ಕೆ ಪಕ್ಷದ ನಾಯಕರು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT