ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಯುವಕನ ಕೈಹಿಡಿದ ಚಿತ್ರಕಲೆ

ಪೋಲಿಯೊಗೆ ತುತ್ತಾದ ಎರಡು ಕಾಲು; ಬದುಕು ರೂಪಿಸಿಕೊಂಡ ಸ್ವಾಭಿಮಾನಿ
Last Updated 3 ಡಿಸೆಂಬರ್ 2020, 8:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೋಲಿಯೊ ಬಗೆಗೆ ಪೋಷಕರು ಹೊಂದಿದ ಅಜ್ಞಾನದಿಂದಾಗಿ ಅಂಗವೈಕಲ್ಯಕ್ಕೆ ತುತ್ತಾದ ಯುವಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರಕಲೆಯ ಬಗೆಗಿನ ಆಸಕ್ತಿ ಅವರಿಗೆ ಹೊಸದೊಂದು ಜೀವನವನ್ನು ಕಲ್ಪಿಸಿಕೊಟ್ಟಿದೆ.

ಚಳ್ಳಕೆರೆ ತಾಲ್ಲೂಕಿನ ಹರವಿಗೊಂಡನಹಳ್ಳಿಯ ಎಂ.ಅನಂತನಾಗ್ ಅವರ ಎರಡು ಕಾಲು ವೈಕಲ್ಯಕ್ಕೆ ತುತ್ತಾಗಿವೆ. ಆರು ವರ್ಷದವರೆಗೆ ಆರೋಗ್ಯವಾಗಿಯೇ ಇದ್ದ ಅನಂತನಾಗ್‌ ಅವರಿಗೆ ಲಸಿಕೆ ಹಾಕಿಸುವಷ್ಟು ತಿಳಿವಳಿಕೆ ಪೋಷಕರಲ್ಲಿ ಇರಲಿಲ್ಲ. ಪೋಲಿಯೊ ಕಾಣಿಸಿಕೊಂಡ ಬಳಿಕ ನಡೆದಾಡುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಅನಂತನಾಗ್‌ ಅವರ ಮನೋಸ್ಥೈರ್ಯವನ್ನು ಅಲುಗಾಡಿಸುವಲ್ಲಿ ಪೋಲಿಯೊ ಕೂಡ ಸೋತುಹೋಯಿತು.

ಚಿತ್ರಕಲೆಯ ಬಗೆಗಿನ ಆಸಕ್ತಿಯಿಂದ ಅನಂತನಾಗ್‌ ಅವರು ನಾಮಫಲಕ, ಮದುವೆ ಡೆಕೋರೆಷನ್‌ ಮಾಡುತ್ತಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ಕಲಿತ ಚಿತ್ರಕಲೆ ಜೀವನಕ್ಕೆ ಆಸರೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಲ್ಲಿ ‘ಅಂನತ ಆರ್ಟ್ಸ್‌’ ಎಂಬ ಮಳಿಗೆ ತೆರೆದಿದ್ದಾರೆ. ಸರ್ಕಾರಿ ಯೋಜನೆ, ಖಾಸಗಿ ಅಂಗಡಿಗಳ ನಾಮಫಲಕ ಬರೆದು ಬದುಕು ಕಟ್ಟಿಕೊಂಡಿದ್ದಾರೆ. ಮಹಾತ್ಮ ಗಾಂಧಿ, ಮದರ್‌ ಥೆರೆಸಾ ಸೇರಿ ಹಲವು ಮಹನೀಯರ ಚಿತ್ರಗಳನ್ನು ಬರೆದು ಗಮನ ಸೆಳೆದಿದ್ದಾರೆ.

‘ಪೋಷಕರು ಅನಕ್ಷರಸ್ಥರಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಂಬಲವಿತ್ತು. ಕೂಲಿ ಕೆಲಸ ಮಾಡುತ್ತಲೇ ಶಾಲೆಗೆ ದಾಖಲು ಮಾಡಿದರು. ನವೋದಯ ವಿದ್ಯಾಲಯ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಅಂಗವಿಕಲರಿಗೆ ಸೌಲಭ್ಯ ಇಲ್ಲದೇ ಇರುವುದರಿಂದ ಪ್ರವೇಶ ನಿರಾಕರಿಸಲಾಯಿತು. ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ಪಡೆಯಲು ಆಗಲಿಲ್ಲವೆಂಬ ಕೊರಗು ಇನ್ನೂ ಇದೇ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅನಂತ್‌ನಾಗ್‌.

ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ, ಜಾಜೂರಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪೂರ್ಣಗೊಂಡ ಬಳಿಕ ಕಲೆಯ ಬಗೆಗೆ ಇವರಲ್ಲಿ ಕುತೂಹಲ ಮೊಳೆತಿದೆ. ಚಿತ್ರಗಳನ್ನು ಗಹನವಾಗಿ ವೀಕ್ಷಿಸುತ್ತಿದ್ದ ಅನಂತನಾಗ್‌ ಅವರಲ್ಲಿ ಕಲೆ ಅಭಿರುಚಿ ಮೂಡಿದೆ. ಪದವಿ ವ್ಯಾಸಂಗಕ್ಕೆ ಚಿತ್ರದುರ್ಗದ ಕಲಾ ಕಾಲೇಜು ಸೇರಿದಾಗ ಚಿತ್ರಕಲೆಯ ಬಗೆಗಿನ ಅರಿವು ವಿಸ್ತಾರಗೊಂಡಿದೆ. ಪರಶುರಾಂಪುರಕ್ಕೆ ತೆರಳಿ ಡಿ.ಇಡಿ ವ್ಯಾಸಂಗ ಮಾಡುತ್ತಿದ್ದಾಗಲೇ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

‘ಪರಶುರಾಂಪುರಕ್ಕೆ ಮರಳಿದ ಬಳಿಕ ನಾಮಫಲಕಗಳನ್ನು ಬರೆದು ಕೊಡುತ್ತಿದ್ದೆ. ವ್ಯಾಸಂಗಕ್ಕೆ ಅಗತ್ಯವಿರುವ ಹಣಕಾಸಿನ ನೆರವು ಕಲೆಯಿಂದ ಸಿಗತೊಡಗಿತು. ಶಿಕ್ಷಣ ಮುಗಿಸಿದ ಬಳಿಕ ಆರ್ಟ್ಸ್‌ ಮಳಿಗೆ ತೆರೆದು ವೃತ್ತಿಪರ ಕೆಲಸಕ್ಕೆ ಕೈಹಾಕಿದೆ. ಶಾಸಕರ ನಿಧಿಯಿಂದ ದ್ವಿಚಕ್ರ ವಾಹನವೂ ಮಂಜೂರಾಯಿತು. ಇದರ ನೆರವಿನಿಂದ ಊರೂರು ಸುತ್ತಿ ಕೆಲಸ ಮಾಡಲು ಅನುಕೂಲವಾಯಿತು’ ಎನ್ನುತ್ತಾರೆ ಅನಂತನಾಗ್‌.

ಚಳ್ಳಕೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿಯೂ ಇವರ ಕಲೆ ಅರಳಿದೆ. ಸರ್ಕಾರಿ ಇಲಾಖೆಯ ನಾಮಫಲಕ, ಸರ್ಕಾರಿ ಯೋಜನೆಗಳ ಬಗ್ಗೆ ಗೋಡೆ ಬರಹ, ನಲಿ–ಕಲಿ ಯೋಜನೆಯ ಕಲಾ ವಸ್ತುಗಳು, ನರೇಗಾ ಯೋಜನೆಯ ಸೌಲಭ್ಯಗಳು ಸೇರಿ ಹಲವು ವಿಚಾರಗಳನ್ನು ಕಲೆಯ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಮದುವೆ, ಜನ್ಮದಿನ ಸೇರಿ ಇತರೆ ಶುಭ ಸಮಾರಂಭದ ಡೆಕೊರೇಷನ್‌ ಕೂಡ ಮಾಡುತ್ತಿದ್ದಾರೆ. ಅಂಗವೈಕಲ್ಯಕ್ಕೆ ತುತ್ತಾದರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಪೋಷಕರಿಗೂ ನೆರವಾಗುತ್ತಿರುವ ಹೆಮ್ಮೆ ಅವರಲ್ಲಿದೆ.

***

ಚಿತ್ರಕಲೆ ಆಕಸ್ಮಿಕವಾಗಿ ಮೊಳೆಯಿತು. ಆಸಕ್ತಿಯಿಂದ ಅದನ್ನು ಪೋಷಣೆ ಮಾಡಿದೆ. ಕಷ್ಟಪಟ್ಟು ಅರಿತು ಅಭ್ಯಾಸ ಮಾಡಿದೆ. ಬದುಕಿಗೆ ಚಿತ್ರಕಲೆಯೇ ದಾರಿದೀಪವಾಯಿತು.

- ಎಂ.ಅನಂತನಾಗ್‌, ಚಿತ್ರಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT