ಮಂಗಳವಾರ, ಡಿಸೆಂಬರ್ 7, 2021
20 °C

ಹೊಸದುರ್ಗದಲ್ಲಿ ಹದ ಮಳೆ: ನಳನಳಿಸುತ್ತಿರುವ ಬೆಳೆ, ಅನ್ನದಾತರ ಮೊಗದಲ್ಲಿ ಮಂದಹಾಸ

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕಳೆದ ವಾರ ತಾಲ್ಲೂಕಿನ ಎಲ್ಲೆಡೆ ಮೂರ್ನಾಲ್ಕು ದಿನಗಳ ಕಾಲ ಸುರಿದ ಹದ ಮಳೆಗೆ ಜಮೀನಿನಲ್ಲಿರುವ ಬೆಳೆಗಳು ನಳನಳಿಸುತ್ತಿವೆ.

ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಮಳೆ ಆಗದ ಕಾರಣ ತಾಲ್ಲೂಕಿನ ಹಲವೆಡೆ ಬೆಳೆಗಳು ಒಣಗುವ ಸ್ಥಿತಿಯಲ್ಲಿದ್ದವು. ಇದರಿಂದಾಗಿ ಈ ಸಂದರ್ಭದಲ್ಲಿ ಮುಖ್ಯವಾಗಿ ರಾಗಿ ಹಾಗೂ ಮೆಕ್ಕೆಜೋಳ ಬೆಳೆಯ ಬೆಳವಣಿಗೆ ಕುಂಠಿತವಾಗಿದ್ದರಿಂದ ಇಳುವರಿ ಕುಸಿತವಾಗುವ ಆತಂಕ ಅನ್ನದಾತರಿಗೆ ಎದುರಾಗಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಅಕ್ಟೋಬರ್‌ ಆರಂಭವಾಗುತ್ತಿದ್ದಂತೆ ಹಸ್ತ ಹಾಗೂ ಚಿತ್ತೆ ಮಳೆ ಬಿರುಸಿನಿಂದ ಸುರಿದ್ದಿದ್ದರಿಂದ ಜಮೀನು ಹದವಾಗಿದ್ದು ಬೆಳೆಗಳಿಗೆ ಜೀವಕಳೆ ಬಂದಿದೆ.

ಈಗಾಗಲೇ ಎಳ್ಳು, ಹೆಸರು, ಶೇಂಗಾ, ಮುಂಗಾರು ಸಾಮೆ ಕಟಾವು ಹಾಗೂ ಸುಗ್ಗಿ ಕಾರ್ಯ ಬಹುತೇಕ ಮುಗಿದಿದೆ. ಈರುಳ್ಳಿ ಕೊಯ್ಲು ಹಾಗೂ ಹತ್ತಿ ಬಿಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮೆಕ್ಕೆಜೋಳ, ರಾಗಿ, ಹಿಂಗಾರು ಸಾಮೆ, ನವಣೆ, ಹುರುಳಿ, ಅಕ್ಕಡಿ ಬೆಳೆಗಳಾದ ಅವರೆ, ತೊಗರಿ, ಮೆಣಸಿನಕಾಯಿ ಗಿಡ, ಅಲಸಂದೆ, ಹರಳು, ಹುಚ್ಚೆಳ್ಳು, ಸಾಸಿವೆ, ತೆಂಗು, ಅಡಿಕೆ, ಬಾಳೆ ಸೇರಿ ಇನ್ನಿತರ ಬೆಳೆಗಳು ಜಮೀನಿನಲ್ಲಿದ್ದು ಬೆಳವಣಿಗೆಯ ಹಂತದಲ್ಲಿರುವ ಕೆಲವು ಬೆಳೆಗಳಿಗೆ ಉತ್ತಮ ಮಳೆ ಬಂದಿರುವುದರಿಂದ ನೇಗಿಲ ಯೋಗಿಯ ಮೊಗದಲ್ಲಿ ಮಂದಹಾಸ ಮೂಡಿದೆ.

ತಡವಾಗಿ ಬಂದ ಹದ ಮಳೆಯು ಬಹುತೇಕ ಶೇಂಗಾ, ಮೆಕ್ಕೆಜೋಳ, ಹತ್ತಿ ಬೆಳೆಗಳಿಗೆ ಅನುಕೂಲವಾಗಿಲ್ಲ. ಏಕೆಂದರೆ ಈ ಬೆಳೆಗಳು ಹೂವು ಆಗುವ, ಕಾಯಿ ಅಥವಾ ಕಾಳುಗಟ್ಟುವ ಅವಧಿ ಮುಕ್ತಾಯವಾಯಿತು. ಈ ಭಾಗದ ಜನರ ಮುಖ್ಯ ಆಹಾರ ಹಾಗೂ ಜಾನುವಾರು ಮೇವಿನ ಬೆಳೆಯಾದ ರಾಗಿ ಹಾಗೂ ಹಿಂಗಾರು ಸಾಮೆ, ಹುರುಳಿ ಬೆಳೆಗಳಿಗೆ ಹದ ಮಳೆಯಾಗಿದ್ದರಿಂದ ಹೆಚ್ಚು ನೆರವಾಗಿದೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಹಲವು ರೈತರು ಬೆಳೆಯ ಕಳೆ ತೆಗೆಸುವ, ಮೇಲುಗೊಬ್ಬರವಾಗಿ ಯೂರಿಯಾ, ಡಿಎಪಿ, 20.20.20, 16.20.20 ಹಾಕಿಸುವ ಮೂಲಕ ಬೆಳೆಯ ಉಪಚಾರ ಮಾಡಿದ್ದಾರೆ. ರಾಗಿ ಬೆಳೆಯು ಹೊಡೆಬಿಚ್ಚುತ್ತಿದ್ದು (ತೆನೆ ಒಡೆಯುತ್ತಿದ್ದು) ಇನ್ನೊಂದು ವಾರ ಬಿಡುವು ಕೊಟ್ಟು ಒಂದು ಹದ ಮಳೆ ಬಂದಲ್ಲಿ ಕೊನೆಗೆ ಬಿತ್ತನೆಯಾಗಿರುವ ರಾಗಿ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಪರಮೇಶ್ವರಪ್ಪ.

ಪರಿಹಾರಕ್ಕೆ ಪ್ರಸ್ತಾವ ಸಲ್ಲಿಕೆ: ಯಾವುದೇ ಬೆಳೆ ಬಿತ್ತನೆ ಮಾಡಿದಾಗ ಕಟಾವಿಗೆ ಬರುವುದಕ್ಕಿಂತ ಮುಂಚೆ ಮಳೆ ಬಾರದೇ ಬೆಳವಣಿಗೆ ಹಾಗೂ ಇಳುವರಿ ಕುಂಠಿತವಾದರೆ ಶೇ 25ರಷ್ಟು ಮಧ್ಯಂತರ ಬೆಳೆ ವಿಮೆ ಪರಿಹಾರ ಕೊಡಲು ಅವಕಾಶವಿದೆ. ನಮ್ಮಲ್ಲಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆಯಾಗದ್ದರಿಂದ ಮುಖ್ಯವಾಗಿ ಮೆಕ್ಕೆಜೋಳ ಹಾಗೂ ರಾಗಿ ಬೆಳೆಗೆ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ 25,495 ಹೆಕ್ಟೇರ್‌ ರಾಗಿ, 7,427 ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆಯಾಗಿದೆ. ರಾಗಿ 230 ಹಾಗೂ ಮೆಕ್ಕೆಜೋಳ 260 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಹಾಗಾಗಿ ರಾಗಿ, ಮೆಕ್ಕೆಜೋಳ ಬೆಳೆಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌. ಈಶ ತಿಳಿಸಿದ್ದಾರೆ.

....

ಬೆಳೆ ಬಾಡುವ ಸ್ಥಿತಿಯಲ್ಲಿದ್ದಾಗ ಹಸ್ತ ಹಾಗೂ ಚಿತ್ತೆ ಮಳೆ ಬಾರದಿದ್ದರೆ ಈ ಬಾರಿ ಒಂದು ಹಿಡಿಯೂ ರಾಗಿ ಆಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಉತ್ತಮ ಮಳೆ ಬಂದಿರುವುದರಿಂದ ಬೆಳೆ ಕೈಸೇರುವ ನಿರೀಕ್ಷೆಯಿದೆ.

-ಹನುಮಂತಪ್ಪ, ರೈತ, ಶ್ರೀರಂಗಾಪುರ

.....

ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿದ ನಂತರದಲ್ಲಿ ಮಳೆ ಬಂದಿದೆ. ಬೆಳೆ ಪರಿಸ್ಥಿತಿ ನೋಡಿಕೊಂಡು ಶೇ 25ರಷ್ಟು ಪರಿಹಾರ ಕೊಡಬಹುದು. ಅಂತಿಮ ಪರಿಹಾರವನ್ನು ಬೆಳೆಯ ಇಳುವರಿಯ ಆಧಾರ ಮೇಲೆ ಕೊಡಲಾಗುತ್ತದೆ.

-ಸಿ.ಎಸ್‌. ಈಶ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು