ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ಬಿಡಾಡಿ ದನಗಳ ಉಪಟಳಕ್ಕೆ ಬೇಸತ್ತ ಜನ

Published 11 ಜುಲೈ 2024, 15:28 IST
Last Updated 11 ಜುಲೈ 2024, 15:28 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಮನಸೋ ಇಚ್ಛೆ ಓಡಾಡುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ. ಬಿಡಾಡಿ ದನಗಳ ಉಪಟಳದಿಂದಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

‘ಪಟ್ಟಣದ ಮುಖ್ಯರಸ್ತೆಯಲ್ಲಿ ದನಗಳು ನಿರ್ಭಯವಾಗಿ ಚಲಿಸುತ್ತಿರುತ್ತವೆ. ಒಮ್ಮೊಮ್ಮೆ ನಡುರಸ್ತೆಯಲ್ಲಿ ಮಲಗಿರುತ್ತವೆ. ಮುಂಜಾನೆ ಹಾಗೂ ಸಂಜೆ ಸಮಯದಲ್ಲಂತೂ ಈ ಮಾರ್ಗವಾಗಿ ಓಡಾಡುವುದೇ ಕಷ್ಟವಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಎಷ್ಟೇ ಹಾರ್ನ್ ಮಾಡಿದರೂ ಅವು ಮೇಲೇಳಲ್ಲ. ವೃದ್ಧರು ಹಾಗೂ ಮಕ್ಕಳು ಸೇರಿ ವಾಹನ ಸವಾರರಿಗೆ ಈ ಮಾರ್ಗವಾಗಿ ಓಡಾಡಲು ಕಿರಿಕಿರಿಯಾಗುತ್ತದೆ’ ಎಂದು ಪಟ್ಟಣದ ನಿವಾಸಿ ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು.

‘ಬಂಡೆ ಸಂತೆಯಲ್ಲೂ ದನಗಳ ಉಪಟಳ ತಪ್ಪಿಲ್ಲ. ದನಗಳು ಮೊದಲು ತರಕಾರಿ, ಸೂಪ್ಪಿಗೆ ಬಾಯಿ ಹಾಕುತ್ತವೆ. ಅವುಗಳನ್ನು ಓಡಿಸಲು ಹರಸಾಹಸ ಪಡಬೇಕಾಗುತ್ತದೆ. ಎರಡು ಮೂರು ದನಗಳು ಒಟ್ಟಿಗೆ ಅಂಗಡಿ ಮುಂದೆ ನಿಂತಿರುತ್ತವೆ. ಜನರು ಸಹ ಅಂಗಡಿಗಳಿಗೆ ಬರಲು ಕಷ್ಟಪಡುವಂತಾಗಿದೆ. ಒಂದು ಹಸು ಓಡಿಸಲು ಮುಂದೆ ಹೋದರೆ ಸಾಕು, ಇನ್ನೊಂದು ಹಸು ಬಂದು ತರಕಾರಿಗೆ ಬಾಯಿ ಹಾಕಿ, ಅಲ್ಲಿದ್ದವುಗಳನ್ನು ಬೀಳಿಸುತ್ತದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂಬುದು ಸೊಪ್ಪು– ತರಕಾರಿ ವ್ಯಾಪಾರಿಗಳ ಅಳಲು.

‘ದನಗಳ ಮಾಲೀಕರಿಗೆ ಈಗಾಗಲೇ ತಿಳಿಸಲಾಗಿದೆ. ಪ್ರಕಟಣೆ ಕೂಡ ಹೊರಡಿಸಲಾಗಿದೆ. ಇದು ಹೀಗೆ ಮುಂದುವರಿದರೆ ಪುರಸಭೆಯಿಂದ ದನಗಳನ್ನು ಹಿಡಿದು, ಗೋಶಾಲೆಗಳಿಗೆ ಸ್ಥಳಾಂತರಿಸಲಾಗುವುದು. ಪುನಃ ದನಗಳ ಮಾಲೀಕರಿಗೆ ನೋಟಿಸ್ ನೀಡಿ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT