ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿನಿಲಯ: ತೆರೆದ ವಿದ್ಯಾರ್ಥಿಗಳ ಆಲಯ

ನಿರೀಕ್ಷಿತ ಪ್ರಮಾಣದಲ್ಲಿ ಹಾಜರಾಗದ ವಿದ್ಯಾರ್ಥಿಗಳು: ಸಂಖ್ಯೆಯಲ್ಲಿ ನಿತ್ಯ ಏರಿಕೆ
Last Updated 4 ಜನವರಿ 2021, 3:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಕಾರಣಕ್ಕೆ ಮುಚ್ಚಿದ್ದ ವಸತಿನಿಲಯಗಳು ಪುನರಾರಂಭವಾಗಿವೆ. ಶೈಕ್ಷಣಿಕ ಪ್ರಗತಿ ಸಾಧಿಸಲು ಈ ಆಶ್ರಯ ತಾಣಗಳು ಅರ್ಹ ವಿದ್ಯಾರ್ಥಿ ಸಮೂಹಕ್ಕೆ ಸಹಕಾರಿಯೂ ಹೌದು. ಈ ಕಾರಣದಿಂದ ವಿದ್ಯಾರ್ಥಿಗಳ ಸಂಖ್ಯೆ ನಿತ್ಯ ಏರಿಕೆ ಕಾಣುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಮಾಜ ಕಲ್ಯಾಣ ಇಲಾಖೆಯ 10, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 5 ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 4 ವಸತಿನಿಲಯಗಳನ್ನು ಕ್ವಾರಂಟೈನ್‌, ಆರೈಕೆ ಕೇಂದ್ರ, ನಿರಾಶ್ರಿತರ ವಾಸ್ತವ್ಯಕ್ಕೆ ಬಳಕೆ ಮಾಡಲಾಗಿತ್ತು.

ಅದರಲ್ಲಿ ಕೆಲ ವಸತಿನಿಲಯಗಳಲ್ಲಿ ಸ್ನಾನಗೃಹ ಹಾಗೂ ಶೌಚಾಲಯ ಸ್ವಚ್ಛವಾಗಿಲ್ಲ ಎಂಬ ದೂರು ಕ್ವಾರಂಟೈನ್‌ಗೆ ಒಳಪಟ್ಟವರಿಂದ ಕೇಳಿ ಬಂದಿತ್ತು. ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಎಲ್ಲವೂ ಮುಕ್ತವಾಗಿವೆ. ಅವೆಲ್ಲವನ್ನು ನಾಲ್ಕೈದು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ಅದರಲ್ಲಿ ಕೆಲವು ಸುಣ್ಣ–ಬಣ್ಣ, ಸ್ವಚ್ಛತೆಯೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಮುಂದಾಗಿವೆ.

2020ರ ನ. 17ರಿಂದಲೇ ಮೆಟ್ರಿಕ್‌ ನಂತರದ ವಸತಿನಿಲಯಗಳು ಜಿಲ್ಲೆಯಲ್ಲಿ ಆರಂಭವಾಗಿವೆ. ಕೋವಿಡ್‌ ಸುರಕ್ಷತಾ ಕ್ರಮ, ನಿರ್ವಹಣೆಗೂ ಹೆಚ್ಚು ಗಮನಹರಿಸಲಾಗಿದೆ. ಆದರೆ, ಆರಂಭದ ದಿನಗಳಲ್ಲಿ ಕೆಲ ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಆ ವೇಳೆ ವಿದ್ಯಾರ್ಥಿಗಳ ಪೋಷಕರಲ್ಲಿರುವ ಕೋವಿಡ್ ಆತಂಕದಿಂದ ಅನೇಕರು ನಿಲಯಗಳತ್ತ ಮುಖ ಮಾಡಿರಲಿಲ್ಲ.

ಜ.1ರಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾದ ಬೆನ್ನಲ್ಲೇ ಕೋವಿಡ್‌–19 ಮಾರ್ಗಸೂಚಿ ಅನುಸರಿಸಿ ಮೆಟ್ರಿಕ್‌ ಪೂರ್ವ ವಸತಿನಿಲಯಗಳನ್ನು ಪುನರಾರಂಭಿಸಲಾಗಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಮೆಟ್ರಿಕ್ ನಂತರದ ವಸತಿನಿಲಯಗಳಲ್ಲಿ ಪದವಿ, ಸ್ನಾತಕೋತ್ತರ, ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳ ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳು ವಾಸ್ತವ್ಯ ಹೂಡಿ ಶೈಕ್ಷಣಿಕ ಅಭ್ಯಾಸ ಮುಂದುವರಿಸಿದ್ದಾರೆ. ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಿಕ್ಷಣ ಕ್ಷೇತ್ರಕ್ಕೆ ಇದು ಆಶಾದಾಯಕ ಬೆಳವಣಿಗೆಯೂ ಹೌದು.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೆಟ್ರಿಕ್ ಪೂರ್ವ 42, ಮೆಟ್ರಿಕ್ ನಂತರ 57 ಸೇರಿ ಒಟ್ಟು 99 ವಸತಿನಿಲಯಗಳಿವೆ. ಕಟ್ಟಡಗಳ ಪೈಕಿ 66 ಸ್ವಂತ ಹಾಗೂ 33 ಬಾಡಿಗೆ ಕಟ್ಟಡದಲ್ಲಿವೆ. ಬಾಲಕರಿಗಾಗಿ 53, ಬಾಲಕಿಯರಿಗಾಗಿ 48 ಪ್ರತ್ಯೇಕಿಸಲಾಗಿದೆ. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ 8 ಸಾವಿರ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದರು. ಮೆಟ್ರಿಕ್‌ ನಂತರ 1,300 ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು, ಮೆಟ್ರಿಕ್ ಪೂರ್ವ 1,200 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ 35 ವಸತಿನಿಲಯ ಇದ್ದು, 25 ತೆರೆದಿವೆ. ಇಲ್ಲಿ 940 ವಿದ್ಯಾರ್ಥಿಗಳು ಮಾತ್ರ ವಾಸ್ತವ್ಯ ಹೂಡಿದ್ದಾರೆ. ಮೆಟ್ರಿಕ್ ಪೂರ್ವ 54 ವಸತಿನಿಲಯಗಳು ಆರಂಭವಾಗಿವೆ. 36 ವಸತಿ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 7 ಹಾಸ್ಟೆಲ್‌ಗಳು ಇವೆ. ಈಗಷ್ಟೇ ಕಾಲೇಜು ತೆರೆದಿರುವ ಕಾರಣ ಪ್ರತಿ ನಿಲಯದಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ. 100ಕ್ಕೂ ಅಧಿಕ ಸ್ವಂತ ಕಟ್ಟಡಗಳಲ್ಲೇ ಇವೆ.

ಕೋವಿಡ್‌ಗೂ ಮೊದಲು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಸ್ತವ್ಯ ಹೂಡುತ್ತಿದ್ದರು. ಆದರೀಗ ವಿದ್ಯಾರ್ಥಿಗಳ ಸಂಖ್ಯೆ ಶೇ 50ರಷ್ಟು ಕಡಿಮೆಗೊಳಿಸಲಾಗಿದೆ. ಒಂದು ಕೋಣೆಗೆ 10ರ ಬದಲು 5 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಒಂದು ಮಂಚ ಬಿಟ್ಟು ಮತ್ತೊಂದು ಮಂಚದಲ್ಲೇ ಮಲಗಲು, ಗುಂಪು ಸೇರದಂತೆ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ: ವಿದ್ಯಾರ್ಥಿಗಳು ಕಾಲೇಜು ಮುಗಿಸಿಕೊಂಡು ವಸತಿನಿಲಯ ಪ್ರವೇಶಿಸುವಾಗ, ಬೆಳಿಗ್ಗೆ ತಿಂಡಿ ಹಾಗೂ ಸಂಜೆ ಊಟಕ್ಕೆ ಬರುವಾಗ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡುವುದನ್ನು ಕಡ್ಡಾಯ ಗೊಳಿಸಲಾಗಿದೆ. ನಿಲಯದೊಳಗಿದ್ದರೂ ಅಗತ್ಯದ ಸಮಯದಲ್ಲೆಲ್ಲ ಮಾಸ್ಕ್ ಧರಿಸಬೇಕಿದೆ. ಕೈಗಳ ಶುಚಿತ್ವಕ್ಕೆ ಸ್ಯಾನಿಟೈಸರ್, ಕುಡಿಯಲು ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಆಯಾ ವಸತಿನಿಲಯಗಳ ನಿಲಯಪಾಲಕರು ಕೋವಿಡ್ ಮಾರ್ಗಸೂಚಿ ಅನುಸರಿಸಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದು, ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

‘ವಿದ್ಯಾರ್ಥಿಗಳು ಕೋವಿಡ್‌ (ಆರ್‌ಟಿಪಿಸಿಆರ್) ಪರೀಕ್ಷಾ ನೆಗೆಟಿವ್ ವರದಿ ಪ್ರತಿ, ಪೋಷಕರ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿ ಕೊಳ್ಳಬೇಕು. ವಸತಿನಿಲಯಗಳಲ್ಲಿ ಒಂದೊಂದು ಐಸೋಲೆಷನ್‌ ಕೊಠಡಿ, ಶೌಚಾಲಯ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ವಾಸಿಗಳಿಗೆ ಯಾರಿಗಾದರೂ ಜ್ವರ, ಶೀತ, ಕೆಮ್ಮು ಮೊದಲಾದ ಲಕ್ಷಣಗಳು ಕಂಡುಬಂದರೆ ಪ್ರತ್ಯೇಕವಾಗಿ ಇಡಲು ಈ ಮುಂಜಾಗ್ರತೆ ವಹಿಸಲಾಗಿದೆ’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವಿನ್.

ಪ್ರಥಮ ವರ್ಷಕ್ಕೆ ಅವಕಾಶವಿಲ್ಲ
‘ಸರ್ಕಾರದ ನಿರ್ದೇಶನದಂತೆ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಮೊದಲಿಗಿಂತಲೂ ಕಡಿಮೆ ಇದೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ.

‘ವಸತಿನಿಲಯಗಳ ಅಡುಗೆ ಕೋಣೆ, ಊಟದ ಕೋಣೆ ನಿರ್ವಹಣೆ, ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಉಲ್ಲಂಘಿಸಿದರೆ ಕ್ರಮ ಜರುಗಿಸಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ವಸತಿನಿಲಯಗಳ ನಿರ್ವಹಣೆಗೆ ವಾರ್ಡನ್‌ ಸಮಸ್ಯೆ

-ಎಸ್‌.ಸುರೇಶ್‌ ನೀರಗುಂದ

ಹೊಸದುರ್ಗ: ತಾಲ್ಲೂಕಿನಲ್ಲಿ ಇರುವ ವಸತಿ ನಿಲಯಗಳಲ್ಲಿ ಭೌತಿಕ ಸಂಪನ್ಮೂಲ ಇದೆ. ಆದರೆ, ಇರುವಂತಹ ವಸತಿ ನಿಲಯಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ವಾರ್ಡ್‌ನ್‌ಗಳನ್ನು ನಿಯೋಜನೆ ಮಾಡುತ್ತಿಲ್ಲ.

ಕೊರೊನಾ ಸೋಂಕಿನ ಭೀತಿಯಿಂದ 8 ತಿಂಗಳು ಶಾಲಾ–ಕಾಲೇಜುಗಳು ಬಂದ್‌ ಆಗಿದ್ದರಿಂದ ಬಹುತೇಕ ವಸತಿನಿಲಯಗಳ ಬಾಗಿಲು ಮುಚ್ಚಿದ್ದವು. ಶೈಕ್ಷಣಿಕ ಚಟುವಟಿಕೆ ಬಂದ್‌ ಆಗಿದ್ದು, ವಿದ್ಯಾರ್ಥಿಗಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದನ್ನು ಮನಗಂಡ ಸರ್ಕಾರ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲಾ–ಕಾಲೇಜು ಹಾಗೂ ವಸತಿನಿಲಯಗಳನ್ನು ಪುನರ್‌ ಆರಂಭಿಸಿರುವುದು ಸಂತಸದ ಸಂಗತಿ.

ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ 7 ಹಾಗೂ ಮೆಟ್ರಿಕ್‌ ಪೂರ್ವ 6 ಸೇರಿ 13 ವಸತಿನಿಲಯಗಳಿವೆ. ಇದರೊಟ್ಟಿಗೆ ಒಂದು ಆಶ್ರಮ ವಸತಿ ಶಾಲೆಯೂ ಇದೆ. ಆದರೆ, ನಿಲಯಪಾಲಕರು (ವಾರ್ಡನ್‌) 5 ಜನ ಮಾತ್ರ ಇದ್ದಾರೆ. ಹಾಗೆಯೇ, ಸಮಾಜ ಕಲ್ಯಾಣ ಇಲಾಖೆಯಲ್ಲಿಯೂ ಮೆಟ್ರಿಕ್‌ ನಂತರದ 5 ಹಾಗೂ ಮೆಟ್ರಿಕ್‌ ಪೂರ್ವ 4 ಸೇರಿ ಒಟ್ಟು 9 ವಸತಿನಿಲಯಗಳಿವೆ. ಒಂದು ಆಶ್ರಮ ಶಾಲೆಯೂ ಇದೆ. ಆದರೆ, ಈ ಇಲಾಖೆಯಲ್ಲಿಯೂ 4 ಮಂದಿ ವಾರ್ಡನ್‌ ಮಾತ್ರ ಇದ್ದಾರೆ.

ವಾರ್ಡನ್‌ಗಳು ಸಂಖ್ಯೆ ಕಡಿಮೆ ಇರುವುದರಿಂದ ಒಬ್ಬೊಬ್ಬರಿಗೆ ಎರಡ್ಮೂರು ವಸತಿನಿಲಯಗಳ ಜವಾಬ್ದಾರಿ ಕೊಡಲಾಗಿದೆ. ಇದರಿಂದಾಗಿ ಕೆಲವು ವಾರ್ಡನ್‌ಗಳಿಗೆ ಎರಡೆರಡು ಹಾಸ್ಟೆಲ್‌ಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಪರಿಸ್ಥಿತಿ ಈಗಿರುವಾಗ ಕೊರೊನಾ ಸೋಂಕು ನಿಯಂತ್ರಣದ ನಿಯಮವನ್ನು ಸಮರ್ಪಕವಾಗಿ ಹೇಗೆ ನಿಭಾಯಿಸುತ್ತಾರೆ ಎಂಬುದು ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರಶ್ನೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡಲು ಇರುವ ವಸತಿನಿಲಯಗಳಿಗೆ ತಲಾ ಒಬ್ಬರು ನಿಲಯಪಾಲಕರನ್ನು ನೇಮಕ ಮಾಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.

***

ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿರುವ ಹಾಸ್ಟೆಲ್‌ಗಳು

-ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ತಾಲ್ಲೂಕಿನ ಹಾಸ್ಟೆಲ್‌ಗಳು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿವೆ.ಒಂದೆರಡು ಕಾಲೇಜು ಹಾಸ್ಟೆಲ್‌ಗಳು ಮಾತ್ರ ಆರಂಭವಾಗಿದ್ದು, ಬೆರಳೆಣಿಕೆಯಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಉಳಿದಿದ್ದಾರೆ. ಉಳಿದಂತೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಇನ್ನೂ ಆರಂಭವಾಗಿಲ್ಲ.

ಜ.1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳ ಆರಂಭವಾಗಿದ್ದು, 6ರಿಂದ 9ನೇ ತರಗತಿಯವರಗೆ ವಿದ್ಯಾಗಮ ತರಗತಿಗಳು ನಡೆಯುತ್ತಿವೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಆರಂಭವಾಗಲು ಸಿದ್ಧಗೊಂಡಿವೆ. ಕೊಠಡಿಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಗಿದೆ.

‘ತಾಲ್ಲೂಕಿನಲ್ಲಿ 7 ಮೆಟ್ರಿಕ್ ಪೂರ್ವ, 6 ಮೆಟ್ರಿಕ್ ನಂತರದ ಬಿಸಿಎಂ ವಿದ್ಯಾರ್ಥಿನಿಲಯಗಳಿದ್ದು, ಸುಮಾರು 700 ವಿದ್ಯಾರ್ಥಿಗಳ ದಾಖಲಾತಿ ಇದೆ. ಉಪ್ಪರಿಗೇನಹಳ್ಳಿ, ಕಾಶೀಪುರ, ಚಿಕ್ಕ ಜಾಜೂರು, ಎನ್.ಜಿ.ಹಳ್ಳಿ, ಆವಿನಹಟ್ಟಿ ಮತ್ತು ಪಟ್ಟಣದಲ್ಲಿ ವಿದ್ಯಾರ್ಥಿನಿಲಯಗಳಿವೆ. 5 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪಟ್ಟಣದಲ್ಲಿ 4, ಮುತ್ತಗದೂರಿನಲ್ಲಿ 2 ಕಾಲೇಜು ಹಾಸ್ಟೆಲ್‌ಗಳಿವೆ. ಪದವಿ ತರಗತಿಗಳು ಆರಂಭಗೊಂಡಿದ್ದು, ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ನಮ್ಮ ಹಾಸ್ಟೆಲ್‌ಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳಿವೆ’ ಎನ್ನುತ್ತಾರೆ ಬಿಸಿಎಂ ವಿಸ್ತರಣಾಧಿಕಾರಿ ಪ್ರದೀಪ್.

‘ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 13 ಹಾಸ್ಟೆಲ್‌ ಗಳಿದ್ದು, 1,020 ವಿದ್ಯಾರ್ಥಿಗಳಿದ್ದಾರೆ. 2 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಾಸ್ಟೆಲ್ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಗಳಿಗೆ ಕಾಯುತ್ತಿದ್ದೇವೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಸಹಾ ಯಕ ನಿರ್ದೇಶಕ ಕುಮಾರ ಸ್ವಾಮಿ.

ಕೆಲವು ಹಾಸ್ಟೆಲ್‌ಗಳಲ್ಲಿ ಶೌಚಾಲಯದ ಸಮಸ್ಯೆ ಇದೆ. ಶೌಚಾಲಯಗಳು ಇದ್ದರೂ ನೀರಿನ ಕೊರತೆಯಿಂದ ಸ್ವಚ್ಛತೆಯ ಸಮಸ್ಯೆ ಇದೆ. ಉಳಿದಂತೆ ಅಗತ್ಯ ಮೂಲಸೌಕರ್ಯಗಳಿವೆ.

***

ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಹಾಸ್ಟೆಲ್‌ನಲ್ಲಿ ಐಸೊಲೇಷನ್‌ ವಿಭಾಗ ತೆರೆಯಲಾಗಿದೆ. ಪ್ರತಿದಿನ ಕುಡಿಯಲು ಬಿಸಿನೀರು, ಕಷಾಯ ಕೊಡಲಾಗುವುದು.
-ಕೆ.ಸಿ.ಶಶಿಧರ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ

***

ವಾರ್ಡನ್‌ ಸಮಸ್ಯೆ ಹೆಚ್ಚಾಗಿದೆ. ಹೆಚ್ಚುವರಿ ಕರ್ತವ್ಯ ನಿರ್ವಹಿಸಲು ಉತ್ಸಾಹ ತೋರಿಸುತ್ತಿಲ್ಲ. ಪ್ರತಿ ಹಾಸ್ಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯಾನುಸಾರ ನಿಲಯ ಪಾಲಕರನ್ನು ನಿಯೋಜಿಸಲು ಉಪನಿರ್ದೇಶಕರಿಗೆ ಮನವಿ ಮಾಡಲಾಗಿದೆ.
-ಎಸ್‌.ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

***

ವಸತಿನಿಲಯಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಯಾವುದೇ ದೂರು ಕೇಳಿಬಂದಿಲ್ಲ. ಆದರೂ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿದರೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಲಿದೆ.
-ದೀಪಕ್‌ರಾಜ್, ನಗರ ಸಹ ಕಾರ್ಯದರ್ಶಿ, ಎಬಿವಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT