ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ತೀವ್ರ ನಿಗಾ ಘಟಕದಲ್ಲಿದೆ ಜಿಲ್ಲಾ ಆಸ್ಪತ್ರೆ ಐಸಿಯು!

Published 11 ನವೆಂಬರ್ 2023, 6:39 IST
Last Updated 11 ನವೆಂಬರ್ 2023, 6:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೃದ್ರೋಗದಿಂದ ಬಳಲುವವರನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಿಸಿದರೆ ಇಲ್ಲಿ ಸಿಗುವುದು ಪ್ರಾಥಮಿಕ ಚಿಕಿತ್ಸೆ ಮಾತ್ರ. ಏಕೆಂದರೆ ಈ ಘಟಕಕ್ಕೇ ಈಗ ತುರ್ತು ಚಿಕಿತ್ಸೆಯ ಅಗತ್ಯವಿದೆ!

ಜಿಲ್ಲಾ ಆಸ್ಪತ್ರೆಯ ತಾಯಿ, ಮಕ್ಕಳ ವಾರ್ಡ್‌ಗೆ ಹೋಗುವ ಚಿಕ್ಕ ದಾರಿಯಲ್ಲಿದೆ ತುರ್ತು ನಿಗಾ ಘಟಕ. ಘಟಕದ ಮುಂದೆ ಅಂಬುಲೆನ್ಸ್‌ ಸಹ ಹೋಗದ ಸ್ಥಿತಿ ಇದೆ. ರಸ್ತೆಯಲ್ಲೇ ವಾಹನ ನಿಲ್ಲಿಸಿ ರೋಗಿಯನ್ನು ಕರೆದುಕೊಂಡು ಹೋಗುವುದು ಇಲ್ಲಿ ಮಾಮೂಲಿಯಾಗಿದೆ. ಐಸಿಯು ಘಟಕದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಗೋಡೆಗಳು ಪಾಚಿ ಕಟ್ಟಿವೆ. ಹವಾನಿಯಂತ್ರಕಗಳು ಕೆಟ್ಟುನಿಂತಿವೆ. ಘಟಕಕ್ಕೆ ಬೇಕಾದ ಮೂಲ ಸೌಲಭ್ಯಗಳು ಸಮರ್ಪಕವಾಗಿಲ್ಲ.

ಉಸಿರಾಟದ ಸಮಸ್ಯೆಯಿಂದ ಬಳುವವರಿಗೆ ಸಕಾಲಕ್ಕೆ ಆಮ್ಲಜನಕ ದೊರಕುವುದು ಇಲ್ಲಿ ದೂರದ ಮಾತಾಗಿದೆ. ಹೃದಯ ಸಮಸ್ಯೆ, ಅಸ್ತಮಾ ರೋಗಿಗಳು ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ತೆರಳುವುದು ಸಾಮಾನ್ಯವಾಗಿದೆ. 2023ರ ಏಪ್ರಿಲ್‌ನಿಂದ ಈವರೆಗೆ ಇಲ್ಲಿ ದಾಖಲಾದ 717 ರೋಗಿಗಳಲ್ಲಿ 225 ಜನರು ಬೇರೆ ಆಸ್ಪತ್ರೆಗೆ ಹೋಗಿರುವುದೇ ಇದಕ್ಕೆ ನಿದರ್ಶನ.

ಘಟಕದಲ್ಲಿ ಕೇವಲ 9 ಹಾಸಿಗೆಗಳಿವೆ. ಪ್ರತಿ ಹಾಸಿಗೆಗೂ ಆಮ್ಲಜನಕ, ಮಾನಿಟರ್‌ಗಳನ್ನು ಆಳವಡಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಈ ಘಟಕಗಳಿಗೆ ಬೇಕಾದ ಅಗತ್ಯ ಅರಿವಳಿಕೆ ತಜ್ಞರು, ತಜ್ಞ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಯಂತ್ರಗಳು ಕಾರ್ಯ ನಿರ್ವಹಿಸುವುದು ದುಸ್ತರವಾಗಿದೆ. ಈ ಕಾರಣಕ್ಕೆ ಐಸಿಯು ಘಟಕ ಉಸಿರು ನಿಲ್ಲಿಸುವ ಹಂತಕ್ಕೆ ತಲುಪಿದೆ.

ವಾತಾವರಣದಲ್ಲಿನ ಏರುಪೇರು, ಕೋವಿಡ್‌ ಬಳಿಕ ಆಗುತ್ತಿರುವ ಬದಲಾವಣೆಯಿಂದಾಗಿ ಜನರಲ್ಲಿ ಹೃದ್ರೋಗ ಸಮಸ್ಯೆ ಕಾಡುತ್ತಿದೆ. ಅಸ್ತಮಾ ಸೇರಿದಂತೆ ಮಾರಕ ಕಾಯಿಲೆಯಿಂದ ಬಳಲುತ್ತಿರುವವರು ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ರಸ್ತೆ ಅಪಘಾತ, ಹೆರಿಗೆ ನೋವು, ಹಾವು ಕಡಿತ, ವಿಷ ಸೇವನೆ, ಶ್ವಾಸಕೋಶ, ಕಿಡ್ನಿ ಸಮಸ್ಯೆ ಇರುವವರಿಗೆ ತೀವ್ರ ನಿಗಾ ಘಟಕದ ಅಗತ್ಯತೆ ಹೆಚ್ಚಾಗಿದೆ. ಆದರೆ ಇಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ‌ಏಳು ತಿಂಗಳಲ್ಲಿ 79 ಜನ ರೋಗಿಗಳು ಮೃತಪಟ್ಟಿದ್ದಾರೆ.

ಐಸಿಯು ನಡೆಯಬೇಕು ಎಂದರೆ ಅರಿವಳಿಕೆ ತಜ್ಞರು ಸೇರಿದಂತೆ ಕೆಲವು ವೈದ್ಯಕೀಯ ಸಿಬ್ಬಂದಿ ಬೇಕು. ಆದರೆ ಹುದ್ದೆಗಳು ಖಾಲಿ ಇವೆ. 8 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿದ್ರೂ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೃದಯಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ ಶಿಫಾರಸು ಮಾಡುವುದು ಇಲ್ಲಿ ನಿತ್ಯದ ಕಾರ್ಯವಾಗಿದೆ. ಆದರೆ ಇಕೋ, ಆಂಜಿಯೋಗ್ರಾಮ್‌, ಥ್ರೆಡ್ ಮಿಲ್ ಪರೀಕ್ಷೆಗೆ ರೋಗಿಯನ್ನು ಒಳಪಡಿಸಲು ಯಂತ್ರೋಪಕರಣಗಳಿಲ್ಲ. ಜತೆಗೆ ಔಷಧಿ, ಮೆಡಿಸಿನಲ್‌ ಆಕ್ಸಿಜನ್‌, ಆರೋಗ್ಯ ಉಪಕರಣ, ಲ್ಯಾಬ್‌ಗಳಿಗೆ ಅಗತ್ಯ ರಾಸಾಯನಿಕ ಪೂರೈಕೆ ಇಲ್ಲವಾಗಿವೆ. ಘಟಕದ ಯಂತ್ರೋಪಕರಣ, ವಿದ್ಯುತ್‌ ಸರಬರಾಜು ದುರಸ್ತಿ ಆಗಬೇಕಿದೆ. ಇನ್ನೂ ಇಂಧನ, ನೀರು ಪೂರೈಕೆ, ಶೌಚಾಲಯದ ಸಮಸ್ಯೆಯೂ ಕಾಡುತ್ತಿದೆ ಎಂಬುದನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಡೆದ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸಭೆಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಮಾಹಿತಿ ನೀಡಿದ್ದರು.

ಗೂಡಂಗಡಿಯಂತಿರುವ ಐಸಿಯು ಘಟಕವನ್ನು ಬೇರೆಡೆ ಸ್ಥಳಾಂತರಿಸಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ. ಇಲ್ಲವಾದರೆ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ರೋಗಿಗಳ ಸಂಬಂಧಿಕರ ಆತಂಕವಾಗಿದೆ.

ಹೃದಯಾಘಾತಕ್ಕೆ ಒಳಗಾದವರು ಐಸಿಯು ಘಟಕಕ್ಕೆ ಹೆಚ್ಚಾಗಿ ದಾಖಲಾಗುತ್ತಾರೆ. ತಜ್ಞ ವೈದ್ಯರ ಕೊರತೆ ಕಾರಣಕ್ಕೆ ಇಸಿಜಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಕಡೆಯವರು ಇಚ್ಛಿಸಿದಾಗ ಮಾತ್ರ ಬೇರೆ ಆಸ್ಪತ್ರೆಗೆ ಶಿಫಾರಸು ನೀಡಲಾಗುತ್ತಿದೆ.
ಡಾ.ರವೀಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಐಸಿಯು ಘಟಕದ ಹೊರ ನೋಟ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಐಸಿಯು ಘಟಕದ ಹೊರ ನೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT