ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯೋತ್ಸವ: ತ್ರಿವ‌ರ್ಣ ಬೆಳಕಿನಲ್ಲಿ ಕಂಗೊಳಿಸುತ್ತಿವೆ ಸ್ಮಾರಕ

ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ; ಜಿಲ್ಲಾಡಳಿತ ಸಕಲ ಸಿದ್ಧತೆ
Published 14 ಆಗಸ್ಟ್ 2024, 15:52 IST
Last Updated 14 ಆಗಸ್ಟ್ 2024, 15:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ವಾತಂತ್ರ್ಯೋತ್ಸವದ ಸಂಭ್ರಮದ ಅಂಗವಾಗಿ ಜಿಲ್ಲೆಯ ಐತಿಹಾಸಿಕ ಸ್ಮಾಕರಗಳು, ಸರ್ಕಾರಿ ಕಚೇರಿ, ಪ್ರಮುಖ ವೃತ್ತಗಳಿಗೆ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಬೆಳಕಿನ ದೀಪಾಲಂಕಾರ ಮಾಡಿರುವುದು ನೋಡುಗರ ಗಮನ ಸೆಳೆಯುತ್ತಿದೆ.

ಕಲ್ಲಿನ ಕೋಟೆಯ ಪ್ರವೇಶದ್ವಾರ, ಮದಕರಿ ನಾಯಕ ಪ್ರತಿಮೆ, ಒನಕೆ ಓಬವ್ವ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್‌ ಪ್ರತಿಮೆ, ಕನಕ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಮುಂತಾದೆಡೆ ದೀಪಾಲಂಕಾರ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ಗುರುವಾರ ಬೆಳಿಗ್ಗೆ 9 ಗಂಟೆಗೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ನಂತರ ಧ್ವಜವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಎನ್‍ಸಿಸಿ ಹಾಗೂ ಪ್ರೌಢಶಾಲಾ ಮಕ್ಕಳು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ತಿರಂಗ ಯಾತ್ರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ತ್ರಿವರ್ಣ ಧ್ವಜ ಹಿಡಿದು ನಗರದಲ್ಲಿ ಬುಧವಾರ ತಿರಂಗ ಯಾತ್ರೆ ನಡೆಸಿದರು.

ಮನೆಮನೆಗೂ ತ್ರಿವರ್ಣ ಧ್ವಜ ಅಭಿಯಾನದಡಿ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಗೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಎಸ್.ಜೆ.ಸೋಮಶೇಖರ್ ‘ಭಾರತದಲ್ಲಿ ಯಾವುದಾದರೂ ಒಂದು ದಿನವನ್ನು ಸುವರ್ಣ ಅಕ್ಷರಗಳಿಂದ ದಾಖಲಿಸುವುದಾದರೆ ಅದು 1947 ಆಗಸ್ಟ್ 15. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಪ್ರತೀಕವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ತ್ರಿವರ್ಣ ಧ್ವಜ ಅಭಿಯಾನದಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ’ ಎಂದರು.

‘ಧ್ವಜ ಯಾತ್ರೆಯು ರಾಷ್ಟ್ರೀಯ ಐಕ್ಯತೆ ಮತ್ತು ಭಾವೈಕ್ಯ ಸಾರುವ ಕೆಲಸ ಮಾಡುತ್ತಿದೆ. ದೇಶದ ತ್ರಿವರ್ಣ ಧ್ವಜವು ಕೇಸರಿ ಬಣ್ಣ ತ್ಯಾಗ ಶೌರ್ಯಗಳ ಸಂಕೇತವಾದರೆ, ಬಿಳಿ ಬಣ್ಣ ಶಾಂತಿಯ ಸಂಕೇತ ಹಾಗೂ ಹಸಿರು ಸಮೃದ್ಧಿಯ ಸಂಕೇತ ಸೂಚಿಸುತ್ತದೆ. ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆ ಆಚರಣೆ ಮಾಡಬೇಕು’ ಎಂದರು.

ಯಾತ್ರೆಯು ನಗರದ ಒನಕೆ ಓಬವ್ವ ವೃತ್ತದಿಂದ ಪ್ರಾರಂಭವಾಗಿ ಮದಕರಿ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದವರೆಗೆ ಸಾಗಿತು. ಪುನಃ ಒನಕೆ ಓಬವ್ವ ವೃತ್ತಕ್ಕೆ ಬಂದು ಅಂತ್ಯಗೊಂಡಿತು. ಜಾಥಾದಲ್ಲಿ ದೇಶ ಭಕ್ತಿಯ ಘೋಷಣೆಗಳು ಹಾಗೂ ಸ್ವಾತಂತ್ರ್ಯ ಸೇನಾನಿಗಳಿಗೆ ಜೈಕಾರಗಳು ಮೊಳಗಿದವು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ವಿ.ವೀಣಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT