ಗುರುವಾರ , ಸೆಪ್ಟೆಂಬರ್ 19, 2019
26 °C
ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ; ಶಾಸಕ ರೇಣುಕಾಚಾರ್ಯ

ಸವದಿ ವಿರುದ್ಧ ಪರೋಕ್ಷ ವಾಗ್ದಾಳಿ

Published:
Updated:
Prajavani

ಚಿತ್ರದುರ್ಗ: ‘ಚುನಾವಣೆಯಲ್ಲಿ ಸೋತವರು, ಯಡಿಯೂರಪ್ಪ ಅವರು ಸಂಕಷ್ಟದಲ್ಲಿದ್ದಾಗ ಸಾಥ್ ನೀಡದವರು ಸಚಿವರಾಗಿದ್ದಾರೆ. ಈಗ ರಾಜಕೀಯದ ನೀತಿ ಪಾಠ ಹೇಳುತ್ತಿದ್ದಾರೆ. ಅದರ ಅಗತ್ಯವಿಲ್ಲ’ ಎಂದು ಸಚಿವ ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪಿಸದೇ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ ನಡೆಸಿದರು.

ಸಿರಿಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಮಾಧ್ಯಮಗಳ ಮುಂದೆಯೂ ಅಳಲು ತೋಡಿಕೊಳ್ಳುವುದಿಲ್ಲ. ಸಮಯ ಬಂದಾಗ ನೇರವಾಗಿ ಮುಖ್ಯಮಂತ್ರಿ ಅವರನ್ನೇ ಕೇಳುತ್ತೇನೆ’ ಎಂದರು.

‘ರಾಜಕಾರಣವೂ ಕ್ರೀಡೆ ಇದ್ದಂತೆ. ಅದರಲ್ಲಿ ಏಳು-ಬೀಳು ಸಹಜ. ಕೆಳಗಿದ್ದವರು ಮೇಲೆ ಬರುತ್ತಾರೆ. ಮೇಲಿದ್ದವರು ಕೆಳಗೆ ಇಳಿಯುತ್ತಾರೆ. ನಾನು ಹೊನ್ನಾಳಿಯ ಹುಲಿ. ಮಣ್ಣಿನ ಹೆಂಟೆಯಲ್ಲ, ಕಲ್ಲು ಬಂಡೆ. ನನಗೆ ಸಾಮರ್ಥ್ಯ, ಶಕ್ತಿ ಎರಡೂ ಇದ್ದು, ಯಾವುದಕ್ಕೂ ಜಗ್ಗುವವನೂ ಅಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಆರು ಮಂದಿ ಶಾಸಕರಿದ್ದು, ಬಿಜೆಪಿ ಭದ್ರ ಕೋಟೆಯನ್ನು ಕಡೆಗಣಿಸಬೇಡಿ ಎಂದು ಹಿರಿಯ ಮುಖಂಡರಲ್ಲಿ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರ ಹಿಂದೆ ಬಾಲ ಅಲ್ಲಾಡಿಸಿಕೊಂಡು ಇದ್ದ ಮಾಜಿ ಸಚಿವ ಆಂಜನೇಯಗೆ ಮಾಡೋಕೆ ಕೆಲಸ ಇಲ್ಲ. ಸಚಿವನಾಗಿದ್ದಾಗ ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಭ್ರಷ್ಟಾಚಾರದ ಆರೋಪವನ್ನು ಎದುರಿಸಿದವನಿಗೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ನೈತಿಕತೆಯೂ ಇಲ್ಲ’ ಎಂದು ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂಬ ಆಂಜನೇಯ ಹೇಳಿಕೆಗೆ ಏಕವಚನದಲ್ಲಿ ತಿರುಗೇಟು ನೀಡಿದರು.

‘ಮಾತನಾಡುವ ಮುನ್ನ ಯೋಚಿಸಿ ಹೇಳಿಕೆ ನೀಡಬೇಕು’ ಎಂದು ಎಚ್ಚರಿಕೆ ನೀಡಿದರು.

Post Comments (+)