ಚಿತ್ರದುರ್ಗ: ನಗರದ ಪ್ರತಿಷ್ಠಿತ ಸಿಟಿ ಇನ್‌ಸ್ಟಿಟ್ಯೂಟ್ (ಸಿಟಿ ಕ್ಲಬ್) ಅವ್ಯವಹಾರ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಂಬಂಧಿ ಸೇರಿದಂತೆ ಕ್ಲಬ್‌ನ ಮೂವರು ಮಾಜಿ ಪದಾಧಿಕಾರಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2020ರಿಂದ 2023ರವರೆಗೆ ಕ್ಲಬ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆರೋಪಿಸಿದ್ದರು. ಈ ಬಗ್ಗೆ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಇಲಾಖಾ ತನಿಖೆ ನಡೆಸಿ ಜೂನ್‌ನಲ್ಲಿ ವರದಿ ಸಲ್ಲಿಸಿದ್ದರು. ತನಿಖೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿತ್ತು.
ಅಕ್ರಮ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಕ್ಲಬ್‌ನ ಮಾಜಿ ನಿರ್ದೇಶಕ ಡಿ.ವಿ.ಟಿ. ಕರಿಯಪ್ಪ ನಗರ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಸೆ.5ರಂದು ಕ್ಲಬ್‌ನ ಮಾಜಿ ಉಪಾಧ್ಯಕ್ಷ ಎಂ.ಎ.ಸೇತುರಾಂ, ಮಾಜಿ ಕಾರ್ಯದರ್ಶಿ ಚಿತ್ರಲಿಂಗಪ್ಪ, ಸಚಿವ ಡಿ.ಸುಧಾಕರ್ ಅವರ ಪತ್ನಿಯ ಸೋದರ, ಕ್ಲಬ್‌ನ ಮಾಜಿ ಖಜಾಂಚಿ ಅಜಿತ್ ಪ್ರಸಾದ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
1931ರಲ್ಲಿ ಎಸ್.ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದ ಸಿಟಿ ಕ್ಲಬ್ ಐತಿಹಾಸಿಕ ಹಿನ್ನೆಲೆ ಹೊಂದಿದೆ. ದೇಶದ ಪ್ರತಿಷ್ಠಿತ 27 ಕ್ಲಬ್‌ಗಳೊಂದಿಗೆ ಸಂಯೋಜನೆ ಹೊಂದಿದೆ. ‘ಚಿತ್ರದುರ್ಗ ಸಿಟಿ ಕ್ಲಬ್ ಮಾದರಿ’ಯಿಂದ ಪ್ರೇರಣೆಗೊಂಡು ರಾಜ್ಯದಲ್ಲಿ ಹಲವು ಕ್ಲಬ್, ಸಂಘ ಸಂಸ್ಥೆಗಳು ಆರಂಭಗೊಂಡಿವೆ.
2023ರಲ್ಲಿ ಸರಿಯಾದ ಸಮಯಕ್ಕೆ ಚುನಾವಣೆ ನಡೆಸದ ಕಾರಣ ಸರ್ಕಾರ ಕ್ಲಬ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಆಡಳಿತಾಧಿಕಾರಿಯಾಗಿದ್ದಾರೆ.
‘ತನಿಖಾ ವರದಿ ಹೊರಬಂದ ತಕ್ಷಣವೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಡಳಿತಾಧಿಕಾರಿಗೆ ಒತ್ತಾಯಿಸಿದ್ದೆವು. ಆದರೆ ಅವರು ಸಚಿವರ ಒತ್ತಡಕ್ಕೆ ಮಣಿದು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಹೀಗಾಗಿ ಪೊಲೀಸರ ಮೊರೆ ಹೋಗಿದ್ದೇವೆ’ ಎಂದು ದೂರುದಾರ ಕರಿಯಪ್ಪ ಹೇಳಿದರು.
ಸದಸ್ಯತ್ವಕ್ಕಾಗಿ ಸಲ್ಲಿಕೆಯಾದ ಅರ್ಜಿಗಳನ್ನು ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಪರಿಶೀಲಿಸದೇ ತಮಗೆ ಬೇಕಾದ 177 ಮಂದಿಗೆ ಸದಸ್ಯತ್ವ ನೀಡಲಾಗಿದೆ. ಬೈಲಾ ಉಲ್ಲಂಘಿಸಿ ಅರ್ಜಿದಾರರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗಿದೆ. ಹಲವರಿಂದ ವಸೂಲಾದ ಶುಲ್ಕವನ್ನು ಬ್ಯಾಂಕ್‌ಗೆ ಜಮಾ ಮಾಡದೇ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ವಾರ್ಷಿಕ ಸಭೆ ನಡೆಸದಿದ್ದರೂ ಸಭೆ ನಡೆಸಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಸಂಸ್ಥೆಯನ್ನು ನವೀಕರಿಸಲಾಗಿದೆ. ಅನುಮತಿ ಪಡೆಯದೇ, ಟೆಂಡರ್ ಇಲ್ಲದೇ ₹ 27 ಲಕ್ಷ ವೆಚ್ಚದಲ್ಲಿ 1,000 ಸೂಟ್‌ಕೇಸ್ ಖರೀದಿಸಿ ಸದಸ್ಯರಿಗೆ ಹಂಚಲಾಗಿದೆ. 3 ವರ್ಷಗಳಲ್ಲಿ ಕ್ಲಬ್‌ನ ಕೋಟ್ಯಂತರ ರೂಪಾಯಿ ಚಟುವಟಿಕೆಗಳ ಬಗ್ಗೆ ಲೆಕ್ಕಪತ್ರ ಇಟ್ಟಿಲ್ಲ, ಈ ಬಗ್ಗೆ ಲೆಕ್ಕ ಪರಿಶೋಧನೆಯಲ್ಲೂ ತಪ್ಪುಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.
‘ಸಿಟಿ ಕ್ಲಬ್ ಕೇವಲ ಐಷಾರಾಮಿ ಚಟುವಟಿಕೆಗಳ ಕ್ಲಬ್ ಆಗಿಲ್ಲ. ಇದು ಸಾಮಾಜಿಕ, ಸಾಂಸ್ಕೃತಿಕ ತಾಣವಾಗಿದೆ. ಆದರೆ ಕೆಲವರು ಕ್ಲಬ್‌ಗೆ ಕೆಟ್ಟ ಹೆಸರು ತಂದಿದ್ದಾರೆ. ಅವರ ವಿರುದ್ಧ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು’ ಎಂದು ಸದಸ್ಯರಾದ ವೆಂಕಟಶಿವರೆಡ್ಡಿ ಒತ್ತಾಯಿಸಿದರು.
ಸಿಟಿ ಕ್ಲಬ್ ಸದಸ್ಯರು ಪೊಲೀಸರ ಮೊರೆ ಹೋಗಿದ್ದುವಿಚಾರಣೆಗೆ ಸಹಕಾರ ನೀಡಲಾಗುವುದು. ಕಾನೂನು ಅಡಿಯಲ್ಲಿ ಕೈಗೊಳ್ಳಬಹುದಾದ ಎಲ್ಲಾ ಕ್ರಮ ಜರುಗಿಸಲಾಗುವುದುಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಸಿಟಿ ಕ್ಲಬ್
ಕ್ಲಬ್‌ನಲ್ಲಿ ಯಾವುದೇ ತಪ್ಪು ಆಗಿಲ್ಲ ಆ ಬಗ್ಗೆ ಇನ್ನೊಂದು ವರದಿ ಇದೆ. ಅದರ ಆಧಾರದ ಮೇಲೆ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಎಫ್‌ಐಆರ್ ರದ್ದತಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆಅಜಿತ್ ಪ್ರಸಾದ್ ಜೈನ್ ಮಾಜಿ ಖಜಾಂಚಿ ಸಿಟಿ ಕ್ಲಬ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.