ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ್‌: ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸಿ

ಅಧಿಕಾರಿಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್‌ ಸೂಚನೆ
Last Updated 27 ಸೆಪ್ಟೆಂಬರ್ 2022, 4:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಹಾಗೂ ಎರಡನೇ ಹಂತದ ಜಲಜೀವನ್‌ ಮಿಷನ್‌ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಡಿಸೆಂಬರ್‌ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು. ಈಗಾಗಲೇ ಪೂರ್ಣ
ಗೊಂಡ ಕಾಮಗಾರಿಗಳನ್ನು ‘ಹರ್‌ ಘರ್‌ ಜಲ್‌’ ಯೋಜನೆಯಡಿ ಪ್ರಮಾಣೀಕರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌
ರಾಜ್‌ ಇಲಾಖೆಯ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮೂರನೇ ಹಂತದ ಕಾಮಗಾರಿಗಳನ್ನು 2023ರ ಮಾರ್ಚ್‌ ಹಾಗೂ ನಾಲ್ಕನೇ ಹಂತದ ಕಾಮಗಾರಿಗಳನ್ನು
ಡಿಸೆಂಬರ್‌ ಒಳಗೆ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕಾಮಗಾರಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪ್ರತಿ ಗ್ರಾಮದಲ್ಲೂ ಓವರ್‌ಹೆಡ್‌ ಟ್ಯಾಂಕ್ ನಿರ್ಮಿಸಬೇಕು’ ಎಂದರು.

‘ಯೋಜನೆ ಅನುಷ್ಠಾನದಲ್ಲಿ ಹಿಂದೆ ಉಳಿದಿರುವ ತಾಲ್ಲೂಕುಗಳು ಪ್ರಗತಿ ಸಾಧಿಸಬೇಕು. ನಲ್ಲಿ ಸಂಪರ್ಕದೊಂದಿಗೆ ಆಧಾರ್‌ ನೋಂದಣಿ ಮಾಡಬೇಕು’ ಎಂದು ತಿಳಿಸಿದರು.

‘ದ್ರವತ್ಯಾಜ್ಯ ನಿರ್ವಹಣೆಗೆ ನರೇಗಾ,15 ಹಣಕಾಸು ಯೋಜನೆ ಹಾಗೂ ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಗಳಲ್ಲಿ ಅನುದಾನಲಭ್ಯವಾಗುತ್ತಿದೆ. ದ್ರವತ್ಯಾಜ್ಯ ನಿರ್ವಹಣೆಕಾಮಗಾರಿಗಳಿಗೆ ಸ್ವಚ್ಛ ಭಾರತ್‌ಮಿಷನ್‌ ಅನುದಾನ ಬಳಸಬೇಕು. ಡಿಸೆಂಬರ್‌ ಅಂತ್ಯದೊಳಗೆ ಬಾಕಿ ಇರುವ ನರೇಗಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದರು.

2021-22ನೇ ಸಾಲಿನಲ್ಲಿ 62.97 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ 99.66ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಸಾಲಿನಲ್ಲಿ 52 ಲಕ್ಷ ಮಾನವದಿನಗಳ ಗುರಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾಹಿತಿ ನೀಡಿದರು.

‘ಕಡಿಮೆ ಮಾನವ ದಿನ ಸೃಜಿಸಿರುವ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ಪಂಚಾಯಿತಿಗಳು ಹೆಚ್ಚಿನ ಪ್ರಗತಿ ಸಾಧಿಸಬೇಕು’ ಎಂದರು.

ಹೊಸದುರ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಬಂದ ಕಾರಣ ನರೇಗಾದಡಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿ ದೇವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಇದ್ದರು.

ಎಫ್‌ಐಆರ್‌ ದಾಖಲಿಸಿ

ಸಂಬಂಧ ಪಟ್ಟ ಎಲ್ಲಾ ಇಲಾಖೆಗಳು ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕಾಮಗಾರಿ ನಡೆಸದೆ ಸುಳ್ಳು ಬಿಲ್ಲು ಸೃಷ್ಟಿಸಿ, ಅವ್ಯವಹಾರ ನಡೆಸಿದವರ ಮೇಲೆ ಎಫ್‌ಐಆರ್‌ ದಾಖಲಿಸಿ, ಹಣ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಅತೀಕ್‌ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 2021-22ನೇ ಸಾಲಿನವರೆಗೆ ಒಟ್ಟು 1,136 ಅವ್ಯವಹಾರ ಪ್ರಕರಣಗಳು ಬಾಕಿಯಿವೆ. ₹ 1.99 ಕೋಟಿ ಹಣ ವಸೂಲಾತಿಗೆ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಶಿಫಾರಸು ಮಾಡಿದೆ. ಇದರಲ್ಲಿ 44 ಪ್ರಕರಣಗಳಲ್ಲಿ ಕಾಮಗಾರಿ ಕೈಗೊಳ್ಳದೆ ಹಣ ಪಡೆದು ವಂಚಿಸಲಾಗಿದೆ. 308 ಪ್ರಕರಣಗಳಲ್ಲಿ ಕಾಮಗಾರಿಗೆ ಹೆಚ್ಚಿನ ಪಾವತಿ ಮಾಡಲಾಗಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಮಾಹಿತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT