ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು: ಗೊಲ್ಲರ ವಿಶಿಷ್ಟ ಸಂಪ್ರದಾಯದ ಕಾಳುಹಬ್ಬ

Published 1 ಮಾರ್ಚ್ 2024, 6:39 IST
Last Updated 1 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಹಿರಿಯೂರು: ಸಮೀಪದ ತಾಳವಟ್ಟಿಕಟ್ಟೆ (ಯರಬಳ್ಳಿ ದೊಡ್ಡಹಟ್ಟಿ)ಯಲ್ಲಿ ನಡೆಯುವ ‘ಕಾಳುಹಬ್ಬ’ ಗೊಲ್ಲ ಸಮುದಾಯದ ವಿಶಿಷ್ಟ ಸಾಂಪ್ರದಾಯಿಕ ಆಚರಣೆಗೆ ನಿದರ್ಶನವಾಗಿದ್ದು, ಮಾರ್ಚ್ 3ರಿಂದ 11 ರವರೆಗೆ ಹಬ್ಬ ನಡೆಯಲಿದೆ.

ಮಾರ್ಚ್ 3ರಂದು ಝಂಡೆ ಮರ ಎತ್ತುವುದು, 4ರಂದು ಗಂಗಾಪೂಜೆ, 5ರಂದು ಕಾಳಿನ ಪೂಜೆ, ಅಕ್ಕಿ ಅಳೆಯುವುದು, ಜಾಡಿ ಹಾಸುವುದು, ಹೆಜ್ಜೆ ನಡೆಯುವುದು, 6ರಂದು ಬೆಳಿಗ್ಗೆ 10ಕ್ಕೆ ಉಂಡೇ ಮಂಡೇ ನಡೆಯುವುದು, ಮಧ್ಯಾಹ್ನ 12ಕ್ಕೆ ತುಲಾಭಾರ, ಸ್ವಾಮಿಯ ಮೈಮೇಲಿನ ಹೂವಿನ ಹಾರ ಹರಾಜು, 2 ಗಂಟೆಗೆ ಅನ್ನಸಂತರ್ಪಣೆ (ಹರಿಸೇವೆ) ನಡೆಯಲಿದೆ. ಮಾರ್ಚ್ 8ರಂದು ಕೊಂಡಕ್ಕೆ ಹೋಗುವುದು, ಮಾರ್ಚ್ 11ರಂದು ಮರುದೀಪದೊಂದಿಗೆ ಹಬ್ಬ ಸಮಾಪನಗೊಳ್ಳುವುದು.

ದೇವರಿಗೆ ಗುಡಿಸಲು: ದೊಡ್ಡಹಟ್ಟಿಯಲ್ಲಿ ಯಾದವ ಮತಕ್ಕೆ ಸೇರಿದ ಹಾಲುಕುಡಿದ ಸ್ವಾಮಿ, ಕಾಟಮಲಿಂಗೇಶ್ವರ ಸ್ವಾಮಿ, ಸಿಂಪಣ್ಣ ದೇವರು ಹಾಗೂ ಗಾದ್ರಿ ದೇವರುಗಳ ದೇಗುಲಗಳು ವಿಶಿಷ್ಟವಾಗಿವೆ. ಹಾಲುಕುಡಿದ ಸ್ವಾಮಿ ದೇವರ ಗುಡಿಸಲು ಮುತ್ತುಗದ ಎಲೆಗಳ ಹೊದಿಕೆಯಿಂದ ನಿರ್ಮಿತವಾಗಿದ್ದರೆ, ಉಳಿದವು ಹುಲ್ಲಿನ ಹೊದಿಕೆಯಿಂದ ನಿರ್ಮಾಣಗೊಂಡಿವೆ.

ದೇಗುಲದ ಪೂಜಾರಿ ನಿಂಗಣ್ಣ ಎರಡು ದಶಕಗಳಿಂದ ದೇವರ ಸೇವೆಯಲ್ಲಿದ್ದಾರೆ. ಜಟಾಧಾರಿ, ಲಿಂಗಧಾರಿಯಾಗಿರುವ ಅವರು ಯಾರನ್ನೂ ಮುಟ್ಟಿಸಿಕೊಳ್ಳುವುದಿಲ್ಲ. ಹಿಂದೆಲ್ಲ ಪೂಜಾರಿ ನಗ್ನ ಸ್ಥಿತಿಯಲ್ಲಿರುತ್ತಿದ್ದರು. ಈಚೆಗೆ ಲಂಗೋಟಿಯನ್ನು ಧರಿಸುತ್ತಿದ್ದು, ಹಬ್ಬದ ಸಂದರ್ಭಗಳಲ್ಲಿ ಮಾತ್ರ ಕಾವಿ ವಸ್ತ್ರ ಧರಿಸುತ್ತಾರೆ. ಅವರಿಗಾಗಿ ನಿರ್ಮಿಸಿರುವ ಕುಟೀರದಲ್ಲಿಯೇ ವಾಸಿಸುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಿನ್ನೆಲೆ: ಅಡಿವೆಣ್ಣ ಮತ್ತು ಗಿಡಿವೆಣ್ಣ ಅವರು ದನಗಳನ್ನು ಮೇಯಿಸುತ್ತಿರುವಾಗ ಅದೇ ಮಾರ್ಗದಲ್ಲಿ ಹಿಮಾಲಯಕ್ಕೆ ಹೋಗುತ್ತಿದ್ದ ಸನ್ಯಾಸಿಗಳಿಬ್ಬರು ಕಣ್ಣಿಗೆ ಬೀಳುತ್ತಾರೆ. ದೇವರನ್ನು ಕಾಣಲು ಹೋಗುತ್ತಿರುವುದಾಗಿ ಸನ್ಯಾಸಿಗಳು ತಿಳಿಸುತ್ತಾರೆ. ಆಗ ಸಹೋದರರು, ‘ಸ್ವಾಮಿ ಮರಳಿ ಬರುವಾಗ ತಮಗೂ ಒಂದು ದೇವರನ್ನು ತನ್ನಿ’ ಎಂದು ಕೋರಿಕೆ ಸಲ್ಲಿಸುತ್ತಾರೆ. ಸನ್ಯಾಸಿಗಳು ಹಿಮಾಲಯದಿಂದ ವಾಪಸ್‌ ಬರುವಾಗ ಸಹೋದರರು ಕಣ್ಣಿಗೆ ಬೀಳುತ್ತಾರೆ. ಸನ್ಯಾಸಿಗಳು, ‘ಅಯ್ಯೋ ದೇವರನ್ನು ತರಲು ಮರೆತೆವಲ್ಲ. ದನಗಾಯಿಗಳಿಗೆ ಏನೆಂದು ಉತ್ತರಿಸುವುದು ಎಂಬ ಚಿಂತೆಯಲ್ಲಿರುತ್ತಾರೆ. ದನಗಾಯಿಗಳು, ‘ಸ್ವಾಮಿ ದೇವರನ್ನು ಕೊಡಿ’ ಎಂದು ಕೇಳುತ್ತಾರೆ. ಆಗ ಸನ್ಯಾಸಿಗಳು, ದಾರಿಯಲ್ಲಿ ಬಿದ್ದಿದ್ದ ಕುರಿ ಪಿಚ್ಚಿಗೆ, ಕಲ್ಲಿನ ಚೂರುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಇದೇ ನಿಮ್ಮ ದೇವರು ತೆಗೆದುಕೊಳ್ಳಿ ಎಂದು ಕೊಟ್ಟು ಹೋಗುತ್ತಾರೆ.

ಗೋಪಾಲಕರು ಸನ್ಯಾಸಿಗಳು ಕೊಟ್ಟ ಗಂಟು ದೇವರನ್ನು ತಿಪ್ಪೆಯ ಮೇಲಿಟ್ಟು, ಕರೆದ ಹಾಲನ್ನು ನಿತ್ಯ  ನೈವೇದ್ಯ ಮಾಡತೊಡಗುತ್ತಾರೆ. ಮನೆಯವರು ‘ಹಾಲನ್ನು ಏಕೆ ತಂದಿಲ್ಲ’ ಎಂದು ಪ್ರಶ್ನಿಸಿದರೆ ದಿನಕ್ಕೊಂದು ಸುಳ್ಳು ಹೇಳುತ್ತಿದ್ದರಂತೆ. ಅನುಮಾನ ಬಂದು ಮನೆಯವರು ದನಗಳ ಗೂಡಿನ ಹತ್ತಿರ ಬಂದಾಗ ಸತ್ಯದ ಅರಿವಾಗಿ ಹಾಲು ಸುರಿಯುತ್ತಿದ್ದ ತಿಪ್ಪೆಯಲ್ಲಿ ಏನಿದೆ ನೋಡೋಣ ಎಂದು ಅಗೆಯಲು ಹೋದಾಗ ಸರ್ಪವೊಂದು ಹೊರ ಬಂದು ಹೋಗತೊಡಗಿತಂತೆ. ಅದನ್ನು ನೋಡಿದ ಗೋಪಾಲಕರು, ‘ತಮ್ಮ ದೇವರು ಓಡುತ್ತಿದೆ’ ಎಂದು ಹೆಗಲ ಮೇಲಿನ ಕರಿಕಂಬಳಿಯನ್ನು ಸರ್ಪದ ಮೇಲೆ ಹಾಕಿ ಬಿಗಿಯಾಗಿ ಕಟ್ಟಿದರಂತೆ. ಅಡವಿಯಲ್ಲಿ ಸಿಕ್ಕ ಮುತ್ತುಗದ ಎಲೆಗಳಿಂದ ಗುಡಿಕಟ್ಟಿ ಪೂಜಿಸಲು ಆರಂಭಿಸಿದರಂತೆ ಎಂಬ ಪ್ರತೀತಿ ಇದೆ.

ಒಮ್ಮೆ ದೇವರು ಸಹೋದರರ ಕನಸಿನಲ್ಲಿ ಬಂದು, ‘ನಾನು ಇಲ್ಲಿರಲಾರೆ, ದಕ್ಷಿಣದಲ್ಲಿರುವ ಯರಬಳ್ಳಿಗೆ ಒಯ್ಯಿರಿ. ಅಲ್ಲಿನ ಹಿರಿಯಟ್ಟಿಯಲ್ಲಿ ನೆಲೆಸುತ್ತೇನೆ. ಅಲ್ಲಿಗೊಬ್ಬ ಪೂಜಾರಿಯನ್ನು ನೇಮಿಸಿದರೆ ಅವನು ಪೂಜೆ ಮುಂದುವರಿಸುತ್ತಾನೆ’ ಎಂದು ಹೇಳಿ ಮಾಯವಾಯಿತಂತೆ. ಅಂದಿನಿಂದ ಆಚರಣೆ ಮುಂದುವರಿಸಿಕೊಂಡು ಬರಲಾಗಿದೆ. ದೇವರಿಗೆ ಅಭಿಷೇಕ ಮಾಡಲು ಚಿಲುಮೆ (ಒರತೆ) ನೀರನ್ನೇ ಬಳಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಕಂಬಳಿ ಹೊದಿಕೆಯ ದೇವರಿಗೆ ವರ್ಷಕ್ಕೊಮ್ಮೆ ಕಾಳುಹಬ್ಬ ಮಾಡಲಾಗುತ್ತದೆ. ಪೂಜೆ ಮುಗಿದ ಮೇಲೆ ಪೂಜಾರಿ ಕಂಬಳಿಯನ್ನು ಹೆಗಲ ಮೇಲೆ ಇಟ್ಟು ನಡೆಯುವುದು ವಾಡಿಕೆ. ಪೂಜೆ ಮುಗಿದ ಮೇಲೆ ದೇವರು ಯಾವ ದಿಕ್ಕಿನ ಕಡೆ ಮುಖ ಮಾಡಿ ಹೋಗುತ್ತದೋ, ಆ ಕಡೆ ಉತ್ತಮ ಮಳೆ–ಬೆಳೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT