ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ | ಮತಗಟ್ಟೆಗಳಿಗೆ ಜಾನಪದ ಕಲೆಯ ಸ್ಪರ್ಶ

ಮತದಾರರನ್ನು ಕೈಬೀಸಿ ಕರೆಯುತ್ತಿವೆ ಮತಗಟ್ಟೆಗಳು, ಚಿತ್ರಕಲೆ ಮೂಲಕ ಆಕರ್ಷಣೆ
Last Updated 14 ಏಪ್ರಿಲ್ 2023, 7:16 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಮತಗಟ್ಟೆ ಪ್ರವೇಶ ದ್ವಾರದಲ್ಲಿ ಆಕರ್ಷಕ ವರ್ಲಿ ಕಲೆಯ ಚಿತ್ರಗಳು.. ಗೋಡೆಗಳಲ್ಲಿ ಯಕ್ಷಗಾನ, ನಾಟ್ಯದ ಚಿತ್ರಗಳು.. ಅಲ್ಲಲ್ಲಿ ಮತದಾನದ ಜಾಗೃತಿ ಮೂಡಿಸುವ ಚಿತ್ರಗಳು...’

ವಿಧಾನಸಭಾ ಚುನಾವಣೆಯ ಮತದಾನಕ್ಕೆ ಸಿಂಗಾರಗೊಂಡ ಮತಗಟ್ಟೆಗಳಿವು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಮತಗಟ್ಟೆಗಳನ್ನು ಆಕರ್ಷಕವಾಗಿ ರೂಪಿಸಲಾಗಿದೆ. ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಇರುವ 177 ಹಾಗೂ 178 ಸಂಖ್ಯೆಯ ಮತಗಟ್ಟೆಗಳು ಹಾಗೂ ಮುಖ್ಯ ವೃತ್ತದಲ್ಲಿರುರುವ ಹೈಟೆಕ್ ಶಾಲೆಯ ಮತಗಟ್ಟೆಗಳನ್ನು ಜಾನಪದ ಕಲೆಗಳ ಮೂಲಕ ಸಿಂಗರಿಸಲಾಗಿದೆ.

ಮತಗಟ್ಟೆಗಳ ಗೋಡೆಗಳಿಗೆ ಆಕರ್ಷಕ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸಲಾಗಿದೆ. ಕರಾವಳಿ ಕಲೆ ಯಕ್ಷಗಾನ, ಜಾನಪದ ನೃತ್ಯ, ರಸ್ತೆ ಮದಿತ ಕಾಂಪೌಂಡ್ ಗೋಡೆಗಳು, ಡಿವೈಡರ್ ಗಳಿಗೆ ಮತದಾನದ ಜಾಗೃತಿ ಘೋಷಣೆಗಳನ್ನು ಬರೆಸಲಾಗಿದೆ.

‘ಚುನಾವಣೆಯನ್ನು ಹಬ್ಬದ ರೀತಿ ಸಂಭ್ರಮದಿಂದ ನಡೆಸುವ ಉದ್ದೇಶ ಹೊಂದಲಾಗಿದೆ. ಮತಗಟ್ಟೆಗಳನ್ನು ಆಕರ್ಷಕವಾಗಿ ಶೃಂಗರಿಸಲಾಗಿದೆ. ಮತ ಹಾಕಲು ಬರುವ ಮತದಾರರು ಮತಗಟ್ಟೆ ನೋಡಿ ಸಂತಸಪಡಬೇಕು. ಚುನಾವಣೆಯಲ್ಲಿ ಮತದಾನ ಮಾಡಿದ ಬಗ್ಗೆ ಹೆಮ್ಮೆ ಪಡಬೇಕು. ಯಾರದೋ ಒತ್ತಡಕ್ಕೆ ಮಣಿದು ಮತ ಹಾಕಲು ಬರದೆ ಸಂತಸದಿಂದ ಮತಗಟ್ಟೆಗೆ ಬರಬೇಕು ಎಂದು ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸಿದ್ದೇವೆ. ದಾವಣಗೆರೆ ಕ್ರಾಸ್, ಎಂಎಂ ಶಾಲೆಯ ಮುಂದೆ ಆಕರ್ಷಕ ಗೋಡೆ ಬರಹ ಬರೆಸಿದ್ದೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ತಿಳಿಸಿದರು.

‘ಚುನಾವಣೆ ಹತ್ತಿರ ಬಂದಂತೆ ಇನ್ನೂ ಹಲವು ವಿನೂತನ ಕಾರ್ಯಗಳನ್ನು ಕೈಗೊಳ್ಳುತ್ತೇವೆ. ಮತಗಟ್ಟೆಗಳಿಗೆ ಭಿನ್ನ ರೂಪ ಕೊಡುತ್ತೇವೆ. ಗೋಡೆ ಬರಹ, ರಸ್ತೆ ಜಾಥಾ, ಹಸ್ತಾಕ್ಷರ ಸಂಗ್ರಹ ಅಭಿಯಾನ, ಮಾನವ ಸರಪಳಿ ರಚನೆ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತೇವೆ’ ಎಂದು ತಿಳಿಸಿದರು.

ಮತಗಟ್ಟೆಗಳನ್ನು ಚಿತ್ರಕಲೆಯ ಮೂಲಕ ಆಕರ್ಷಕವಾಗಿಸುತ್ತಿದ್ದೇವೆ. ಪರಿಸರ ಸ್ನೇಹಿ ಮತಗಟ್ಟೆಗಳನ್ನು ರೂಪಿಸುವ ಗುರಿ ಇದೆ.

ಎ.ವಾಸಿಂ, ಪುರಸಭೆ ಮುಖ್ಯಾಧಿಕಾರಿ

ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತಗಟ್ಟೆಗಳನ್ನು ಆಕರ್ಷಕವಾಗಿ ರೂಪಿಸಲಾಗುತ್ತಿದೆ.

ಪಿ.ವಿವೇಕಾನಂದ, ಚುನಾವಣಾಧಿಕಾರಿ

ಯುವ ಮತದಾರರು ಸಂಭ್ರಮದಿಂದ ಮತ ಚಲಾಯಿಸಬೇಕು. ಒತ್ತಡಕ್ಕೆ ಮಣಿಯದೆ ಸ್ವಯಂ ಪ್ರೇರಿತರಾಗಿ ಮತದಾನ ಮಾಡಬೇಕು.

ಎನ್.ಜೆ.ನಾಗರಾಜ್, ಹೊಳಲ್ಕೆರೆ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT