ಶುಕ್ರವಾರ, ಜುಲೈ 1, 2022
23 °C

ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೇ ಗಂಡಾಂತರ: ಜಿ.ಎಸ್.ಮಂಜುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋಮುವಾದಿ ಬಿಜೆಪಿಯಿಂದ ಸೃಷ್ಟಿಯಾಗಿರುವ ಸಮಸ್ಯೆಗಳ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ದೇಶಕ್ಕೇ ಗಂಡಾಂತರ ಎದುರಾಗಲಿದೆ ಎಂದು ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ಡಿ.ದೇವರಾಜ ಅರಸು ಅವರ ಪುಣ್ಯತಿಥಿಯ ಅಂಗವಾಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಫಲ ಉಂಡ ಕೆಲವರು ಪಕ್ಷದ ವಿರುದ್ದ ನಿಂತಿರುವುದು ನೋವಿನ ಸಂಗತಿ. ಕಾಂಗ್ರೆಸ್‍ನಲ್ಲಿ ಸ್ವಾರ್ಥಕ್ಕಾಗಿ ಯಾರು ಬದುಕುತ್ತಿಲ್ಲ. ಧ್ವನಿ ಇಲ್ಲದವರಿಗೆ ಶಕ್ತಿ ತುಂಬಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕಾದರೆ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ’ ಎಂದು ಪ್ರತಿಪಾದಿಸಿದರು.

‘ಬಲಿಷ್ಠ ಜಾತಿಗಳ ಎದುರು ನಿಲ್ಲಲು ಅನೇಕರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ಡಿ.ದೇವರಾಜ ಅರಸುರವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಡಿ.ದೇವರಾಜ ಅರಸು ಅವರು ಸಣ್ಣ ಹಾಗೂ ಸೂಕ್ಷ್ಮ ಜಾತಿಗಳನ್ನು ಗುರುತಿಸಿ ಅಧಿಕಾರ ನೀಡಿದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯ್ದೆ ಜಾರಿಗೆ ತಂದು ಎಲ್ಲ ಜಾತಿಯ ಭೂರಹಿತರಿಗೆ ಭೂಮಿ ನೀಡಿದರು’ ಎಂದು ಸ್ಮರಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಮಾತನಾಡಿ, ‘ಜಾತಿ ಬಲ ಇಲ್ಲದಿದ್ದರೂ ದಿಟ್ಟ ನಿರ್ಧಾರದಿಂದ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದರು. ಸಮಾಜಕ್ಕೆ ಅಪಾರ ಕೊಡುಗೆ ನೀಡಿದರು. ಅವರು ಕುಟುಂಬಕ್ಕಾಗಿ ಎಂದಿಗೂ ಸ್ವಾರ್ಥಿಯಾಗಲಿಲ್ಲ. ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು’ ಎಂದು ಹೇಳಿದರು.

ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ‘ಕೋವಿಡ್‌ ಎರಡನೇ ಅಲೆಗೆ ದೇಶ ತತ್ತರಿಸಿ ಹೋಗಿದೆ. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇಂತಹ ಸಂಕಷ್ಟದಲ್ಲಿ ಮಾನವೀಯತೆ, ಹೃದಯವಂತಿಕೆಯಿಂದ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‌ ಇದ್ದರು.

*
ಸಮಾಜದ ಅತ್ಯಂತ ಹಿಂದುಳಿದ ತಳ ಸಮುದಾಯಗಳನ್ನು ಮೇಲೆತ್ತಲು ಅರಸು ಅವರು ಶ್ರಮಿಸಿದರು. ಇದರ ಫಲವಾಗಿ 102 ಜಾತಿಗಳು ಹಿಂದುಳಿದ ವರ್ಗಗಳ ಜಾತಿ ಪಟ್ಟಿಗೆ ಸೇರಿದವು.
–ಎನ್.ಡಿ.ಕುಮಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ

*
ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಹಾಗೂ ಶೋಷಿತರ ಧ್ವನಿಯಾಗಿದ್ದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಗೆ ತಂದರು. ನಾಡಿಗೆ ಅವರ ಕೊಡುಗೆ ಅಪಾರ.
-ಸುದರ್ಶನ್, ಕಾಂಗ್ರೆಸ್‌ ಕಾನೂನು ವಿಭಾಗದ ಅಧ್ಯಕ್ಷ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು