ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ಕ್ಕೆ ಕೆಪಿಸಿಸಿ ನೇತೃತ್ವದಲ್ಲಿ ಬಾಬೂ ಜಯಂತಿ

Last Updated 1 ಏಪ್ರಿಲ್ 2022, 5:06 IST
ಅಕ್ಷರ ಗಾತ್ರ

ಹಿರಿಯೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಕೆಪಿಸಿಸಿ ನೇತೃತ್ವದಲ್ಲಿ ಮಾಜಿ ಉಪಪ್ರಧಾನಿ ದಿ.ಬಾಬೂ ಜಗಜೀವನರಾಂ ಅವರ ಜಯಂತಿಯನ್ನು ಏ. 5ರಂದು ಹಿರಿಯೂರಿನಲ್ಲಿ ಆಚರಿಸಲಾಗುವುದು ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದರು.

ನಗರದಲ್ಲಿರುವ ಮಾಜಿ ಸಚಿವ ಡಿ. ಸುಧಾಕರ್ ಕಚೇರಿಯಲ್ಲಿ ಗುರುವಾರ ಜಗಜೀವನರಾಂ ಜಯಂತಿ ಆಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಗಜೀವನರಾಂ ದೇಶ ಕಂಡ ಅಪರೂಪದ ರಾಜಕಾರಣಿ. ಸೋಲರಿಯದ ನೇತಾರ. ಶೋಷಿತ ಸಮುದಾಯದ ನಾಯಕರೊಬ್ಬರು ಪ್ರಧಾನಿ ಆಗುವುದನ್ನು ಅಂದಿನ ಜಾತಿ ವ್ಯವಸ್ಥೆ ತಪ್ಪಿಸಿತು. ಹೀಗಾಗಿ ಉಪಪ್ರಧಾನಿ ಹುದ್ದೆಗೆ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು. ರಕ್ಷಣಾ ಖಾತೆ ಒಳಗೊಂಡು ಹಲವು ಮಹತ್ತರ ಖಾತೆಗಳನ್ನು ನಿರ್ವಹಿಸುವ ಮೂಲಕ ಖಾತೆಗಳಿಗೆ ಜೀವ ತುಂಬಿದ್ದರು. ಕೃಷಿ ಸಚಿವರಾಗಿ ಅವರು ಮಾಡಿದ ಸಾಧನೆ ಇತಿಹಾಸದ ಪುಟಗಳಲ್ಲಿ ಉಳಿದಿದೆ. ಅಂತಹ ನೇತಾರನ ಜೀವಮಾನದ ಸಾಧನೆಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಗಾಂಧೀಜಿ, ನೆಹರೂ ಒಡನಾಡಿಯಾಗಿದ್ದ ರಾಂ ಅವರು ಇಂದಿರಾಗಾಂಧಿಯವರ ಸಹವರ್ತಿ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ನೇತಾರರ ಜಯಂತಿಗಳನ್ನು ನಾಲ್ಕು ಗೋಡೆಗಳ ಮಧ್ಯಕ್ಕಿಂತ ಸಾರ್ವಜನಿಕರ ಸಮ್ಮುಖದಲ್ಲಿ ಆಚರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯೋಜಿಸಿದ್ದು, ರಾಜ್ಯದಲ್ಲಿ ಪ್ರಥಮ ಬಾರಿಗೆ ಹಿರಿಯೂರಿನಲ್ಲಿ ಅಂತಹ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ’ ಎಂದು ಆಂಜನೇಯ ತಿಳಿಸಿದರು.

ಮಾಜಿ ಸಚಿವ ಡಿ. ಸುಧಾಕರ್, ‘ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದ ಎದುರಿನ ವಿಶಾಲ ಜಾಗದಲ್ಲಿ ಏ. 5ರಂದು ಬೆಳಿಗ್ಗೆ 11ಕ್ಕೆ ಜಗಜೀವನರಾಂ ಜಯಂತಿ ಸಮಾರಂಭ ನಡೆಯಲಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್ ಒಳಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ. 15 ರಿಂದ 20 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು. ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಡಾ. ಸುಜಾತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT