ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಿಕ್ಷಣ ವ್ಯವಸ್ಥೆ ಮರೀಚಿಕೆ

ರಾಂಪುರ: ಮೊಳಕಾಲ್ಮುರು ತಾಲ್ಲೂಕಿನ ದೊಡ್ಡ ಗ್ರಾಮ, 40 ಹಳ್ಳಿಗಳಿಗೆ ಕೇಂದ್ರ
Last Updated 1 ಸೆಪ್ಟೆಂಬರ್ 2021, 7:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ದೇವಸಮುದ್ರ ಹೋಬಳಿಯ ರಾಂಪುರದಲ್ಲಿ ಸರ್ಕಾರದ ಶಿಕ್ಷಣ ವ್ಯವಸ್ಥೆ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ಬೆಂಗಳೂರು–ಬಳ್ಳಾರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರವು ಮೊಳಕಾಲ್ಮುರು, ಸಂಡೂರು, ಕೂಡ್ಲಿಗಿ ಹಾಗೂ ಸೀಮಾಂಧ್ರ ಗಡಿಭಾಗದ 35–40 ಗ್ರಾಮಗಳಿಗೆ ಶೈಕ್ಷಣಿಕವಾಗಿ, ವ್ಯಾವಹಾರಿಕವಾಗಿ ಕೇಂದ್ರ ಸ್ಥಳವಾಗಿದೆ. ಗ್ರಾಮದಲ್ಲಿ 15,000 ಜನಸಂಖ್ಯೆ ಇದ್ದು, ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಸಹ ಪಾತ್ರವಾಗಿದೆ.

ರಾಂಪುರದಲ್ಲಿ 1ರಿಂದ 8ನೇ ತರಗತಿಯವರೆಗೆ ಮಾತ್ರ ಸರ್ಕಾರಿ ಶಿಕ್ಷಣ ವ್ಯವಸ್ಥೆಯಿದೆ. ಹೆಚ್ಚಿನ ಸರ್ಕಾರಿ ಶಿಕ್ಷಣಕ್ಕೆ ಗ್ರಾಮದ ಖಾಸಗಿ ಶಾಲೆಗಳು, ದೇವಸಮುದ್ರ ಸರ್ಕಾರಿ ಪ್ರೌಢಶಾಲೆ, ಮೊಳಕಾಲ್ಮುರು ಹಾಗೂ ಬಳ್ಳಾರಿಯ ಶಾಲೆಗಳನ್ನು ಅವಲಂಬಿಸ
ಬೇಕಾಗಿದೆ. ರಾಂಪುರದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು ಎಂಬ ಕೂಗು ಹತ್ತಾರು ವರ್ಷಗಳಿಂದ ಕೇಳಿ ಬರುತ್ತಿದ್ದರೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಮಂಜೂರಾತಿ ನೀಡುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿ
ಯೊಬ್ಬರು ಮಾಹಿತಿ ನೀಡಿದರು.

ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಮಾತನಾಡಿ, ‘ಸರ್ಕಾರದ ಸುತ್ತೋಲೆಯ ಪ್ರಕಾರ ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆ ಇಲ್ಲದಿದ್ದಲ್ಲಿ ಮಾತ್ರ ಮಂಜೂರು ಮಾಡಲಾಗುತ್ತಿದೆ. ಆದರೆ ರಾಂಪುರದಲ್ಲಿ ಖಾಸಗಿ ಪ್ರೌಢಶಾಲೆಗಳು ಇರುವ ಕಾರಣ ಮಂಜೂರಾತಿ ಸಿಗುತ್ತಿಲ್ಲ. ಆರ್‌ಇಎಂಎಸ್ ಯೋಜನೆಯಲ್ಲಿ ಮಾತ್ರ ವಿಶೇಷ ಪ್ರಕರಣ ಎಂದು ಮಂಜೂರಾತಿಗೆ ಅವಕಾಶವಿದೆ. ಇದು ಸರ್ಕಾರದ ಹಂತದಲ್ಲಿ ಆಗಬೇಕಿರುವ ಕಾರ್ಯ ಎಂದರು.

‘ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೂ ಇಲ್ಲದ ಕಾರಣ ಸಮರ್ಪಕ ವಸತಿ ನಿಲಯ, ಸರ್ಕಾರಿ ಪಿಯು ಕಾಲೇಜು, ಪದವಿ ಕಾಲೇಜು ಸ್ಥಾಪಿಸಿಲ್ಲ. ಇದರಿಂದ ರಾಂಪುರ ಮತ್ತು ಸುತ್ತಲಿನ ವಿದ್ಯಾರ್ಥಿಗಳು ಬಳ್ಳಾರಿಗೆ ಹೆಚ್ಚು ಹೋಗುತ್ತಿದ್ದಾರೆ. ಬಸ್ಸು, ಆಟೊಗಳಲ್ಲಿ ಟಾಪ್‌ಗಳ ಮೇಲೆ ಕುಳಿತು ಸಂಚರಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಜಾಣ ಕುರುಡು ತೋರುತ್ತಿದ್ದಾರೆ’ ಎಂಬ ಆರೋಪ ಕೇಳಿ ಬರುತ್ತಿದೆ.

‘ಹೋಬಳಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಿದ್ದು, ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಹೋಬಳಿಯ ಸಾಕಷ್ಟು ಸರ್ಕಾರಿ ಶಾಲೆಗಳ ಶಿಕ್ಷಕ ಹುದ್ದೆಗಳು ಖಾಲಿ ಇವೆ. ರಾಂಪುರದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಿದಲ್ಲಿ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಮನವಿ ಮಾಡಲಾಗಿದೆ.

ರಾಂಪುರ ಕ್ಲಸ್ಟರ್‌ನಲ್ಲಿ 1-10ನೇ ತರಗತಿವರೆಗೆ 5,000 ವಿದ್ಯಾರ್ಥಿಗಳು ಇದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಪೋಷಕರು ಶುಲ್ಕ ಭರಿಸಲು ಸಾಧ್ಯವಾಗದೇ ಸರ್ಕಾರಿ ಶಾಲೆಗಳತ್ತ ಮುಖ ಮಾಡುವುದು ಹೆಚ್ಚಿದೆ.

- ಎಂ. ಹನುಮಂತಪ್ಪ, ಬಿಆರ್‌ಸಿ, ಮೊಳಕಾಲ್ಮುರು

ರಾಂಪುರದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದು ನಿಜ. ಗ್ರಾಮ ಪಂಚಾಯಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಹೆಚ್ಚಿನ ಶಿಕ್ಷಣ ವ್ಯವಸ್ಥೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

- ಪರಮೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ, ರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT