ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಸಾಟ್ ಸಂಸ್ಥೆಯಿಂದ ಸರ್ಕಾರಿ ಶಾಲೆಗೆ 4 ಶಾಲಾ ಕೊಠಡಿಗಳ ನಿರ್ಮಾಣ

Last Updated 9 ನವೆಂಬರ್ 2021, 7:03 IST
ಅಕ್ಷರ ಗಾತ್ರ

ನಾಯಕನಹಟ್ಟಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಕಲಿಯಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಹೋಬಳಿಯ ಎನ್. ದೇವರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ಹೊಣೆಗಾರಿಕೆಯಡಿ ಒಸಾಟ್ ಸಂಸ್ಥೆಯಿಂದ 4 ಹಾಗೂ ನಬಾರ್ಡ್ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ 2 ಶಾಲಾ ಕೊಠಡಿಗಳು ಮತ್ತು ಅಡುಗೆ ಕೋಣೆಯ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಶಿಥಿಲಗೊಂಡಿರುವ ಎಲ್ಲ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡುವುದಕ್ಕಾಗಿ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು. ಶಿಥಿಲಗೊಂಡಿರುವ ಶಾಲೆಗಳ ದುರಸ್ತಿ ಹಾಗೂ ಹೊಸ ಶಾಲೆಗಳನ್ನು ನಿರ್ಮಾಣಕ್ಕಾಗಿ ಅನುದಾನವನ್ನು ತರಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಹೊಣೆಗಾರಿಕೆಯಡಿ ಒಸಾಟ್ ಸಂಸ್ಥೆ ವತಿಯಿಂದ ಎನ್. ದೇವರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ತರಗತಿ ಕೊಠಡಿಗಳು ಹಾಗೂ ಅಡುಗೆ ಕೋಣೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತಮಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಕಲಿಯುವ ಜತೆಗೆ ಗುರುಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಸಾಟ್ ಸಂಸ್ಥೆಯ ಕಿಶೋರ್ ಉಳ್ಳಾ, ‘ಒಸಾಟ್ ಸಂಸ್ಥೆಯನ್ನು ಸೇವಾ ಮನೋಭಾವವುಳ್ಳವರು ಸೇರಿ ಹುಟ್ಟು ಹಾಕಿದ್ದು, ಈ ಸಂಸ್ಥೆಯು ಶೇ 1.5 ರಷ್ಟು ಮಾತ್ರ ಆಡಳಿತಾತ್ಮಕ ವೆಚ್ಚ ಮಾಡುತ್ತಿದೆ. ಸಂಸ್ಥೆಯು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಿದ್ದು, ನಾವು ಕಟ್ಟಿದ ಶಾಲೆಯನ್ನು ಗ್ರಾಮಸ್ಥರು ಸೇರಿ ನಿರ್ವಹಣೆ ಮಾಡಿಕೊಳ್ಳಬೇಕು. ಪ್ರತಿ ವರ್ಷ ಶಾಲೆ ನಿರ್ವಹಣೆ ಬಗ್ಗೆ ನೋಡಿಕೊಂಡು ಹೋಗುತ್ತೇವೆ. ವಿದ್ಯೆ ಎಂದರೆ ಕೇವಲ ಕಲಿಕೆಯಲ್ಲ. ಅದೊಂದು ಜ್ಞಾನ ಮತ್ತು ಬದುಕಿನ ವಿಕಾಸದ ಪ್ರಕ್ರಿಯೆ’ ಎಂದರು.

ತಹಶೀಲ್ದಾರ್ ಎನ್. ರಘುಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ರಾಮದಾಸ್, ಜಯಪಾಲಯ್ಯ, ಪಿ.ಶಿವಣ್ಣ, ಎನ್.ಮಹಾಂತಣ್ಣ, ಎಚ್.ವಿ. ಶಿವಪ್ರಕಾಶ್, ಸಿ.ಬಿ.ಮೋಹನ್, ಟಿ.ರೂಪಾ ತಿಪ್ಪೇಸ್ವಾಮಿ, ಮಲ್ಲೇಶ್, ದಿವಾಕರ್‌ರೆಡ್ಡಿ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT