ಸೋಮವಾರ, ನವೆಂಬರ್ 30, 2020
20 °C
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

ದೀಪಗಳು ಬೆಳಗಲಿ, ಪಟಾಕಿ ಹಾವಳಿ ಸಲ್ಲ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಬೆಳಕು ಜ್ಞಾನದ ಸಂಕೇತವಾದರೆ, ಕತ್ತಲು ಅಜ್ಞಾನದ ಸಂಕೇತ. ಆದರೆ ನಮ್ಮಲ್ಲಿರುವ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡುವಂತಾಗಬೇಕು. ದೀಪಗಳ ಹಬ್ಬವೂ ನಿಮ್ಮೆಲ್ಲರ ಬದುಕನ್ನು ಕತ್ತಲಿನಿಂದ ಬೆಳಕಿನಡೆಗೆ ಸಾಗುವಂತೆ ಮಾಡಬೇಕಾಗಿದೆ ಎಂದು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ದೀಪಾವಳಿಯ ಸಂದೇಶ ನೀಡಿರುವ ಅವರು, ‘ದೀಪಗಳ ಹಬ್ಬ ಎಂದರೆ ಕೇವಲ ಹೊರಗಡೆ ದೀಪಗಳನ್ನು ಬೆಳಗಿಸುವುದಲ್ಲ. ಬದಲಾಗಿ ನಿಮ್ಮ ಆಂತರ್ಯದಲ್ಲಿ ಬೆಳಕು ಮೂಡುವಂತಾಗಬೇಕಾಗಿದೆ. ಕತ್ತಲಲ್ಲಿ ದೀಪ ಹಚ್ಚಿ ಆತ್ಮಾನುಸಂಧಾನ ಮಾಡುವ ಬದಲು ಪಟಾಕಿ ಹೊಡೆದು ಗಲಾಟೆ ಗದ್ದಲವೆಬ್ಬಿಸುವ ಮೂಲಕ ಹಬ್ಬ ವಿಕೃತರೂಪವಾಗುವುದನ್ನು ನಾವು ಕಾಣುತ್ತಿದ್ದೇವೆ. ದೀಪಗಳ ಬೆಳಕು ಹೆಚ್ಚಾಗುವ ಬದಲು ಪಟಾಕಿಗಳ ಹಾವಳಿಯಾಗಿದೆ’ ಎಂದು ವಿಷಾದಿಸಿದ್ದಾರೆ.

‘ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದೊಯ್ಯುವಂತಾಗಬೇಕಿದೆ. ಶತಮಾನಗಳಿಂದ ಗಿಳಿಪಾಠ ಹೇಳಿದ್ದೇವೆ ಮತ್ತು ಕೇಳುತ್ತಿದ್ದೇವೆ. ಇಂತಹ ಹಬ್ಬಗಳಂದು ಪುರಾಣ ಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೆ ಇನ್ನೂ ಜೀವಂತವಾಗಿದ್ದಾರೆ ಎಂದು ಭಾವಿಸಿ ನಮ್ಮೊಳಗಿರುವ ರಾಕ್ಷಸಿ ಗುಣಗಳನ್ನು ನಿರ್ಮೂಲನೆಗೊಳಿಸುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ’ ಎಂದು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು