ಮೌಲ್ಯವರ್ಧನೆಯ ಹಕ್ಕನ್ನು ರೈತರಿಗೆ ನೀಡಿ

7
ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಚಂದ್ರಶೇಖರ್‌ ಸಲಹೆ

ಮೌಲ್ಯವರ್ಧನೆಯ ಹಕ್ಕನ್ನು ರೈತರಿಗೆ ನೀಡಿ

Published:
Updated:

ಚಿತ್ರದುರ್ಗ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಹಕ್ಕನ್ನು ರೈತರಿಗೆ ನೀಡಿದಾಗ ಮಾತ್ರ ದೇಶದ ಕೃಷಿ ಬಿಕ್ಕಟ್ಟಿಗೆ ಪರಿಹಾರ ಸಿಗುತ್ತದೆ ಎಂದು ರೈತ ಹೋರಾಟಗಾರ ಚಂದ್ರಶೇಖರ ಬಾಳೆ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ನಡೆಯುತ್ತಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಚಿತ್ರದುರ್ಗ ಜಿಲ್ಲೆಯ ಕೃಷಿ ಬಿಕ್ಕಟ್ಟಿಗೆ ಪರಿಹಾರಗಳು’ ಕುರಿತು ಅವರು ವಿಷಯ ಮಂಡಿಸಿದರು.

‘ಮೆಣಸಿನ ಕಾಯಿ ಬೆಳೆಯುವ ರೈತರಿಗೆ ಖಾರದ ಪುಡಿ ತಯಾರಿಸುವ ರೀತಿ ಗೊತ್ತಿಲ್ಲ. ಉಪ್ಪು ತಯಾರಿಸುವವರಿಗೆ ಮಾರಾಟ ಮಾಡುವ ವಿಧಾನ ತಿಳಿದಿಲ್ಲ. ಹೀಗಾಗಿ, ಕಾರ್ಪೋರೇಟ್‌ ಕಂಪೆನಿ ಸಿದ್ಧಪಡಿಸಿದ ಖಾರದ ಪುಡಿ, ಉಪ್ಪು ರೈತರ ಅಡುಗೆ ಮನೆ ಸೇರುತ್ತಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಣ್ಣ ಯಂತ್ರ ನೀಡಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ರೈತರ ಬದುಕಲ್ಲಿ ಬೆಳಕು ಮೂಡುತ್ತದೆ’ ಎಂದು ಪ್ರತಿಪಾದಿಸಿದರು.

‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬ ಸ್ವಾಮಿನಾಥನ್‌ ವರದಿಯನ್ನು ಸರ್ಕಾರ ಜಾರಿಗೆ ತಂದರೆ ರೈತರ ಬಹುತೇಕ ಸಂಕಷ್ಟಗಳು ನಿವಾರಣೆ ಆಗುತ್ತವೆ. ಕೇವಲ ಸಾಲ ಮನ್ನಾ ಮಾಡಿದರೆ ರೈತರ ಬದುಕು ಹಸನವಾಗುವುದಿಲ್ಲ. ಮಾಸಿಕ ₹ ಹತ್ತು ಸಾವಿರ ಆದಾಯ ಸಿಗುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. ಆಗ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂದರು.

‘ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿಯೂ ದುಡಿಮೆಯ ಹಣ ರೈತರ ಬಳಿ ಉಳಿಯುತ್ತಿಲ್ಲ. ಆರೋಗ್ಯವಂತರಾಗಿದ್ದ ರೈತರು ನೀರಾವರಿಯ ಪರಿಣಾಮವಾಗಿ ರೋಗಪೀಡಿತರಾಗುತ್ತಿದ್ದಾರೆ. ಪಂಜಾಬ್‌ ಹೊರತುಪಡಿಸಿದರೆ ಅತಿ ಹೆಚ್ಚು ರಸಗೊಬ್ಬರ ಮತ್ತು ಕೀಟನಾಶಕ ಮಾರಾಟವಾಗುತ್ತಿರುವುದು ತುಂಗ–ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ. ಹಸಿರು ಕ್ರಾಂತಿ ಕೂಡ ರೈತರ ಬದುಕನ್ನು ಹಸನ ಮಾಡಿಲ್ಲ’ ಎಂದರು.

‘ಈವರೆಗೆ ದೇಶದಲ್ಲಿ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಪ್ರತಿ 30 ನಿಮಿಷಕ್ಕೆ ಒಬ್ಬ ರೈತರು ಮೃತಪಡುತ್ತಿದ್ದಾರೆ. ರೈತರ ಹಿತ ಕಾಪಾಡಬೇಕಾದ ಸರ್ಕಾರಗಳು ಕಾರ್ಪೋರೇಟ್‌ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ. ರೈತರ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ಧೋರಣೆಗಳು ಬದಲಾಗದ ಹೊರತು ಕೃಷಿಗೆ ಭವಿಷ್ಯವಿಲ್ಲ’ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಎಸ್‌.ಸಿ.ವೀರಭದ್ರಪ್ಪ, ಉಪನ್ಯಾಸಕ ಬಿ.ಎನ್‌.ಎಂ.ಸ್ವಾಮಿ, ರೈತ ಎಂ.ಗೋವಿಂದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !