ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಸು ಮರೆತು ಒಗ್ಗೂಡಿದ ಚಂದ್ರಪ್ಪ–ಕಾರಜೋಳ

ಶಾಸಕರ ಮನೆಗೆ ತೆರಳಿ ಪ್ರಚಾರಕ್ಕೆ ಆಹ್ವಾನಿಸಿದ ಬಿಜೆಪಿ ಅಭ್ಯರ್ಥಿ
Published 3 ಏಪ್ರಿಲ್ 2024, 15:10 IST
Last Updated 3 ಏಪ್ರಿಲ್ 2024, 15:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಮುನಿಸು ಮರೆತು ಒಗ್ಗೂಡಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಬಂಡಾಯ ಶಮನ ಮಾಡಿದ್ದರಿಂದ ಹರ್ಷಗೊಂಡ ಗೋವಿಂದ ಕಾರಜೋಳ ಅವರು ಬುಧವಾರ ಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ಬೆಳಗಿನ ಉಪಹಾರವನ್ನು ಒಟ್ಟಿಗೆ ಸೇವಿಸಿ ಚುನಾವಣೆಯ ಕುರಿತು ಚರ್ಚೆ ನಡೆಸಿದರು. ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ ಜೊತೆಗಿದ್ದರು.

‘2019ರ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್‌ ಕೇಳಿದ್ದೆವು. ಈ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಮೂರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಕ್ಷೇತ್ರ ವ್ಯಾಪ್ತಿಯ ಎಲ್ಲ ಹಳ್ಳಿಗಳನ್ನು ಸುತ್ತಿ ಪಕ್ಷ ಸಂಘಟನೆ ಮಾಡಲಾಗಿತ್ತು. ಹೈಕಮಾಂಡ್‌ ಕಾರಜೋಳ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ನರೇಂದ್ರ ಮೋದಿ ಪ್ರಧಾನಿ ಆಗುವುದು ಮುಖ್ಯ. ಹೀಗಾಗಿ, ಒಗ್ಗೂಡಿ ಕೆಲಸ ಮಾಡಲಿದ್ದೇವೆ’ ಎಂದು ಶಾಸಕ ಎಂ.ಚಂದ್ರಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಪುತ್ರನಿಗೆ ಇನ್ನೂ ವಯಸ್ಸಿದೆ. ವರಿಷ್ಠರ ಸೂಚನೆಗೆ ಬದ್ಧವಾಗಿದ್ದು ಕೆಲಸ ಮಾಡಲಿದ್ದೇವೆ. ಪಕ್ಷಕ್ಕೆ ದ್ರೋಹವಾಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ. ಟಿಕೆಟ್‌ ಕೈತಪ್ಪಿದ ಸಿಟ್ಟಿನಲ್ಲಿ ಏನೋ ಮಾತನಾಡಿರಬಹುದು. ಆದರೆ, ಇದನ್ನು ಮರೆತು ಕೆಲಸ ಮಾಡಲಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ರೈತ ಮೋರ್ಚಾದ ವೆಂಕಟೇಶ್‌ ಯಾದವ್‌, ನಾಗರಾಜ್‌ ಬೇದ್ರೆ ಇದ್ದರು.

ಯಡಿಯೂರಪ್ಪ ಅವರಿಗೆ ನೀಡಿದ ವಾಗ್ದಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಒಳಗೊಂದು ಹೊರಗೊಂದು ಮಾಡುವುದಿಲ್ಲ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ.

-ಎಂ.ಸಿ.ರಘುಚಂದನ್‌ ಬಿಜೆಪಿ ಯುವ ಮುಖಂಡ

‘ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ’

ಶಾಸಕ ಎಂ.ಚಂದ್ರಪ್ಪ ಮತ್ತು ನಾನು ರಾಜಕಾರಣದಲ್ಲಿ ಸುದೀರ್ಘ ಅವಧಿಯಿಂದ ಸ್ನೇಹಿತರು. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಒಂದೇ ಕುಟುಂಬದ ಸಹೋದರರ ರೀತಿಯಲ್ಲಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು. ‘ವರಿಷ್ಠರ ಆದೇಶದಿಂದ ಅನಿವಾರ್ಯವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ರಘುಚಂದನ್‌ ಆಶಾವಾದಿ ಯುವಕ. ಪಕ್ಷ ಸಂಘಟನೆ ಮಾಡಿಕೊಂಡು ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಟಿಕೆಟ್‌ ಕೈತಪ್ಪಿದ ಆವೇಶದಲ್ಲಿ ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ನಾಮಪತ್ರ ಸಲ್ಲಿಕೆಯ ಬಳಿಕ ಒಗ್ಗಟ್ಟಿನ ಹೋರಾಟ ಆರಂಭವಾಗಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT