ಬುಧವಾರ, ಜೂನ್ 16, 2021
28 °C
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಆರೋಪ

ಶಾಸಕರ ಘನತೆಗೆ ಧಕ್ಕೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರ ಘನತೆಗೆ ಧಕ್ಕೆ ತರುವಂತಹ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇರೆಗೆ ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಓಂಕಾರಮೂರ್ತಿ ಎಂಬುವರನ್ನು ಚಿಕ್ಕಜಾಜೂರು ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ಓಂಕಾರಮೂರ್ತಿ ಮಾಹಿತಿ ಹಕ್ಕು ಕಾರ್ಯಕರ್ತರಾಗಿಯೂ ಗುರುಸಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವಿಡಿಯೊ ಬಗ್ಗೆ ಶಾಸಕ ಚಂದ್ರಪ್ಪ ಅವರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಹೊಳಲ್ಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಘಟಕ ಉದ್ಘಾಟನೆಯ ಸಂದರ್ಭದಲ್ಲಿ ಶಾಸಕ ಚಂದ್ರಪ್ಪ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಅವರ ನಡುವೆ ಚರ್ಚೆ ನಡೆದಿತ್ತು. ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೊದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ಶಾಸಕರಲ್ಲಿ ಅಸಮಾಧಾನ ಮೂಡಿಸಿತ್ತು.

‘20 ನಿಮಿಷ ನಡೆದ ಸಂಭಾಷಣೆಯ ವಿಡಿಯೊವನ್ನು 20 ಸೆಕೆಂಡ್‌ಗೆ ಕತ್ತರಿಸಿ ಶಾಸಕರಿಗೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿದ್ದಾರೆ. ಫೇಸ್‌ಬುಕ್‌ ಖಾತೆಯಲ್ಲಿ ಮೇ 16ರಂದು ಹಂಚಿಕೊಂಡು ಶಾಸಕರ ಘನತೆಗೆ ಧಕ್ಕೆಯುಂಟು ಮಾಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕು. ಮೂಲ ವಿಡಿಯೊ ಪಡೆದು ತೇಜೋವಧೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಶಾಸಕ ಚಂದ್ರಪ್ಪ ಅವರು ಸೋಮವಾರ ರಾತ್ರಿ ಚಿಕ್ಕಜಾಜೂರು ಠಾಣೆಗೆ ದೂರು ನೀಡಿದ್ದರು. 

ಬಂಧನಕ್ಕೆ ಕಾಂಗ್ರೆಸ್‌ ಖಂಡನೆ

ಆರ್‌ಟಿಐ ಕಾರ್ಯಕರ್ತ ಓಂಕಾರಮೂರ್ತಿ ಎಂಬುವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. ಟೀಕೆಯನ್ನು ಹತ್ತಿಕ್ಕಲು ಕಾನೂನು ಮತ್ತು ಪೊಲೀಸರನ್ನು ಶಾಸಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

‘ಓಂಕಾರಮೂರ್ತಿ ಅವರು ಆರ್‌ಟಿಐ ಕಾರ್ಯಕರ್ತರಾಗಿದ್ದು, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲರ ವಿರುದ್ಧವೂ ಗಂಭೀರ ಟೀಕೆ ಮಾಡಿದ್ದಾರೆ. ಶಾಸಕ ಚಂದ್ರಪ್ಪ ಅವರ ಉಡಾಫೆ ಮಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರನ್ನು ಬಂಧಿಸಿದ್ದು ವಾಕ್‌ ಸ್ವಾತಂತ್ರ್ಯದ ಹರಣ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಾಸಕ ಚಂದ್ರಪ್ಪ ಅವರು ದಬ್ಬಾಳಿಕೆ ವರ್ತನೆಯನ್ನು ನಿಲ್ಲಿಸಬೇಕು. ಪೋಲಿಸರು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು