ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋಟೆನಾಡಲ್ಲಿ ಶಿವನಾಮ ಜಪ, ಜಾಗರಣೆ

ದೇಗುಲಗಳಲ್ಲಿ ವಿಶೇಷ ಪೂಜೆ, ಶಿವನ ದರ್ಶನ ಪಡೆದ ಭಕ್ತರು
Published 8 ಮಾರ್ಚ್ 2024, 16:28 IST
Last Updated 8 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ಭಕ್ತರು ಶುಕ್ರವಾರ ಶಿವನಾಮ ಸ್ಮರಣೆ ಮಾಡಿದರು. ಶಿವನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾತ್ರಿಯಿಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಜಾಗರಣೆ ನಡೆಸಿದರು.

ಹಬ್ಬದ ಅಂಗವಾಗಿ ಶಿವ, ಈಶ್ವರ ದೇಗುಲಗಳು ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದವು. ಅಭಿಷೇಕ, ಪೂಜೆ, ಬಿಲ್ವಾರ್ಚನೆಗಳು ನಡೆದವು. ರಾತ್ರಿ ದೇಗುಲಗಳು ದೀಪಾಲಂಕಾರದಲ್ಲಿ ಕಂಗೊಳಿಸಿದವು. ಭಕ್ತರ ದಂಡು ದೇಗುಲಗಳಿಗೆ ಭೇಟಿ ನೀಡಿ ತ್ರಿನೇತ್ರನನ್ನು ಕಣ್ತುಂಬಿಕೊಂಡರು.

ನಗರದ ನೀಲಕಂಠೇಶ್ವರಸ್ವಾಮಿ ದೇಗುಲ, ಮೇಲುದುರ್ಗದ ಹಿಡಿಂಬೇಶ್ವರಸ್ವಾಮಿ, ಪಾತಾಳ ಲಿಂಗೇಶ್ವರ ದೇಗುಲ ಹಾಗೂ ಕನ್ಯಕಾ ಪರಮೇಶ್ವರಿ ದೇಗುಲಗಳು ಭಕ್ತರಿಂದ ತುಂಬಿದ್ದವು. ‘ಹರ ಹರ ಮಹಾದೇವ’ ಜಯಘೋಷ ಎಲ್ಲೆಡೆ ಮೊಳಗಿತು. ಮಠ, ದೇಗುಲಗಳಲ್ಲಿ ನಡೆದ ಪೂಜಾ ಕೈಂಕರ್ಯಗಳನ್ನು ನೋಡಿ ಭಕ್ತರು ಪುಳಕಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರಸ್ವಾಮಿ ದೇಗುಲ ವಿಶೇಷವಾಗಿ ಕಂಗೊಳಿಸುತ್ತಿತ್ತು. ದೇವರ ದರ್ಶನ ಪಡೆಯಲು ಭಕ್ತರು ಸಂಜೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಗಾಯತ್ರಿ ಭವನದಿಂದ ಇದ್ದ ಸರತಿಯಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಚಿಕ್ಕಪೇಟೆಯ ಆನೆಬಾಗಿಲು ಸಮೀಪದ ಪಾತಾಳೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆಯ ಬಳಿಕ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು.

ಕೋಟೆಯಲ್ಲಿರುವ ಹಿಡಿಂಬೇಶ್ವರಸ್ವಾಮಿ ದೇವಸ್ಥಾನ, ಗಾರೆಬಾಗಿಲು ಈಶ್ವರ ದೇವಸ್ಥಾನ, ಕೆಳಗೋಟೆಯಲ್ಲಿರುವ ಶಿವಭಕ್ತ ಬೇಡರ ಕಣ್ಣಪ್ಪ ದೇವಸ್ಥಾನ, ಮದಕರಿಪುರ ಕಾಳಹಸ್ತೇಶ್ವರಸ್ವಾಮಿ ದೇಗುಲ, ರಂಗಯ್ಯನಬಾಗಿಲು ಸಮೀಪದ ಉಮಾ ಮಹೇಶ್ವರ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬಿಲ್ವಪತ್ರೆ, ಬನ್ನಿ, ಕನಕಾಂಬರ, ಸೇವಂತಿ, ದುಂಡುಮಲ್ಲಿಗೆ ಸೇರಿ ತರಹೇವಾರಿ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮನೆಗಳಲ್ಲಿಯೂ ಶಿವನಿಗೆ ಕ್ಷೀರ, ಎಳನೀರು, ಪಂಚಫಲಗಳಿಂದ ಅಭಿಷೇಕ ನಡೆಯಿತು.

ಮಹಾ ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಧಾಮ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾಲಯದ ಮುಖ್ಯಸ್ಥೆ ರಶ್ಮಿ ಅವರ ನೇತೃತ್ವದಲ್ಲಿ ಭಕ್ತರು ನಗರದ ಪ್ರಮುಖ ಬೀದಿಗಳಲ್ಲಿ ಶಿವಲಿಂಗುಗಳೊಂದಿಗೆ ಮೆರವಣಿಗೆ ನಡೆಸಿದರು.

ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು
ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಕಾಳಹಸ್ತೇಶ್ವರಸ್ವಾಮಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿರುವುದು
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಕಾಳಹಸ್ತೇಶ್ವರಸ್ವಾಮಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿರುವುದು
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಧಾಮ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಶಿವಲಿಂಗುಗಳೊಂದಿಗೆ ಮೆರವಣಿಗೆ ನಡೆಯಿತು
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಧಾಮ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಶಿವಲಿಂಗುಗಳೊಂದಿಗೆ ಮೆರವಣಿಗೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT