ಶನಿವಾರ, ಜೂನ್ 25, 2022
26 °C

ಕೋವಿಡ್ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ: ಅಧಿಕಾರಿಗಳಿಗೆ ಶಾಸಕ ಎಂ. ಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಇಲ್ಲಿನ ತರಳಬಾಳು ಕೋವಿಡ್‌ ಆರೈಕೆ ಕೇಂದ್ರ ಈ ಭಾಗದಲ್ಲೇ ಉತ್ತಮವಾಗಿದೆ. ಕೇಂದ್ರದಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ. ಕೋವಿಡ್ ಆರೈಕೆಗಾಗಿ ಬಂದಿರುವ ಸುತ್ತಲಿನ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂದು ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ಗ್ರಾಮದ ತರಳಬಾಳು ಕೋವಿಡ್‌ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಜತೆ ಚರ್ಚಿಸಿದರು.

‘ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚುತ್ತಿದೆ. ಜನರು ಸ್ವಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡು ಸಮಸ್ಯೆಯಿದ್ದಲ್ಲಿ ತಪ್ಪದೇ ಕೋವಿಡ್‌ ಕೇಂದ್ರಕ್ಕೆ ದಾಖಲಾಗಬೇಕು. ಇದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕುಟುಂಬದವರ ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ. ಸೋಂಕಿತರು, ವೈದ್ಯಾಧಿಕಾರಿ, ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತರಳಬಾಳು ಸೇವಾ ಸಮಿತಿ ಉತ್ತಮ ಸೇವೆ ಸಲ್ಲಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಳಗವಾಡಿ, ಮೇಗಳಹಳ್ಳಿ, ಪುಡಕಲಹಳ್ಳಿ, ಬಸವನಶಿವನಕೆರೆ ಹಾಗೂ ಹಳವುದರ, ಮದಕರಿಪುರ ಸೇರಿ ವಿವಿಧೆಡೆಯಿಂದ ತಪಾಸಣೆಗೆ ಬಂದ ರೋಗಿಗಳಿಂದ ಮಾಹಿತಿ ಪಡೆದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ‘ನಗರಗಳಲ್ಲಿ ಸಿಗುವ ಚಿಕಿತ್ಸೆ ಗ್ರಾಮೀಣ ಭಾಗದಲ್ಲಿಯೂ ಸಿಗುವ ವ್ಯವಸ್ಥೆಯನ್ನು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಲ್ಪಿಸಿಕೊಟ್ಟಿದ್ದಾರೆ. ದಾಖಲಾಗಿರುವವರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು’ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.

ಬಳಿಕ ಡಾ.ಬಿ.ವಿ. ಗಿರೀಶ್ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎನ್‌ಬಿ ಮೋಹನ್, ಫಾರ್ಮಸಿಸ್ಟ್ ಮೋಹನ್, ವೈದ್ಯಾಧಿಕಾರಿಗಳಾದ ನಾರದಮುನಿ, ವಿಜಯಲಕ್ಷಿ, ಯಶಸ್ವಿನಿ, ಪ್ರತಿಭಾ, ಪೊಲೀಸ್‌ ಸಿಬ್ಬಂದಿ ಸಿ.ಬಿ. ಮಲ್ಲಿಕಾರ್ಜುನ್, ಎಂ.ಡಿ. ಬಸವರಾಜು, ಪೆಟ್ರೋಲ್ ಬಸವರಾಜು, ಚಿದಾನಂದ, ಸಿದ್ದೇಶ್, ಪ್ರಸನ್ನಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು