ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಸಮಸ್ಯೆ: ನಲುಗಿದ ನಿಂಬೆ ಬೆಳೆಗಾರರು

ಚಳ್ಳಕೆರೆ ತಾಲ್ಲೂಕಿನಲ್ಲಿ ನಿಂಬೆ ಕೃಷಿಗೆ ಕಾರ್ಮಿಕರ ಕೊರತೆ
Last Updated 14 ಮೇ 2022, 2:27 IST
ಅಕ್ಷರ ಗಾತ್ರ

ಚಳ್ಳಕೆರೆ: ಉತ್ತಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಾಲೀಕರಿಂದ ಜಮೀನು ಗುತ್ತಿಗೆ ಪಡೆದು ಕೊಳವೆಬಾವಿಯಲ್ಲಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಉತ್ಸುಕತೆಯಿಂದ ಬೆಳೆದ ನಿಂಬೆಗೆ ಮಾರುಕಟ್ಟೆ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ.

ತಾಲ್ಲೂಕಿನ ಚೌಳೂರು ಗ್ರಾಮದ ರೈತ ನಿಂಗಪ್ಪ ಅವರು ಚಳ್ಳಕೆರೆ ಕಸಬಾ ಹೋಬಳಿ ವ್ಯಾಪ್ತಿಯ ದುರ್ಗಾವರ ಗ್ರಾಮದ ಉದ್ಯಮಿ ರಂಗನಾಥ ಅವರಿಂದ ಸರಿಗೋರಿಗೆ ಗುತ್ತಿಗೆ ಪಡೆದ 30 ಎಕರೆ ನೀರಾವರಿ ಭೂಮಿಯಲ್ಲಿ 15 ಎಕರೆ ನಿಂಬೆ ಬೆಳೆದಿದ್ದಾರೆ.

ರಾಗಿ, ಈರುಳ್ಳಿ, ತೆಂಗು, ತರಕಾರಿ ಹೀಗೆ ಜಮೀನಿನಲ್ಲಿ ಬೆಳೆದ ಬೆಳೆಯಿಂದ ಬಂದ ಆದಾಯದಲ್ಲಿ ಶೇ 50 ಹಂಚಿಕೆ ಒಪ್ಪಂದದ ಪ್ರಕಾರ 7-8 ವರ್ಷ ನಡೆದುಕೊಳ್ಳುವ ಮೂಲಕ ಆಹಾರ ಧಾನ್ಯ, ತರಕಾರಿ ಹಾಗೂ ಹಣ್ಣಿನ ಬೆಳೆಯನ್ನು ನಿರಂತರವಾಗಿ ಬೆಳೆಯತ್ತ ಬಂದಿದ್ದಾರೆ.

ಜಮೀನಿನಲ್ಲಿ ಯಾವುದೇ ಬೆಳೆ ಬೆಳೆದರೂ ಅದರ ನಿರ್ವಹಣೆ ಮಾತ್ರ ಗುತ್ತಿಗೆದಾರರ ನಿಂಗಪ್ಪ ಅವರದು. ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಬರುವುದರಿಂದ 15 ಎಕರೆಯಲ್ಲಿ ನಿಂಬೆ ಬೆಳೆದಿದ್ದಾರೆ.

‘ದೂರದ ಹಳ್ಳಿಯಿಂದ ಪ್ರತಿದಿನ ವಾಹನದಲ್ಲಿ ಕರೆದುಕೊಂಡು ಬರಬೇಕು. ಪ್ರತಿಯೊಬ್ಬ ಕಾರ್ಮಿಕರಿಗೆ ತಲಾ 500 ಕೂಲಿ, ತಿಂಡಿ-ಊಟದ ಜತೆಗೆ ಪ್ರಯಾಣದ ವೆಚ್ಚ ನೀಡುವುದಲ್ಲದೆ ಮುಂಗಡ ಹಣ ನೀಡಿದ ನಂತರ ಬೆಳೆ ಕಟಾವ್ ಮಾಡಲು ಬರುತ್ತಾರೆ. ಇಲ್ಲದೆ ಹೋದಲ್ಲಿ ಕೂಲಿ ಕೆಲಸಕ್ಕೆ ಯಾರೂ ಬರುವುದಿಲ್ಲ. ಬೆಳೆದ ಬೆಳೆಯಲ್ಲಿ ಅರ್ಧ ಭಾಗ ಕೂಲಿಗೆ ತೆಗೆದಿಡಬೇಕು. ತಾಡಪತ್ರಿ, ಅನಂತಪುರ, ರಾಯದುರ್ಗ ಮುಂತಾದ ಆಂಧ್ರಪ್ರದೇಶದ ಮಾರುಕಟ್ಟೆಗೆ ನಿಂಬೆಹಣ್ಣು ಸಾಗಿಸಲು ತುಂಬಾ ದುಬಾರಿ. ಸಾಗಾಣಿಕೆ, ಮಾರುಕಟ್ಟೆಯ ಜತೆಗೆ ಕೂಲಿ ಕಾರ್ಮಿಕರ ತೀವ್ರ ಸಮಸ್ಯೆಯಿಂದ ನಷ್ಟವನ್ನು ಅನುಭವಿಸುವಂತಾಗಿದೆ’ ಎಂದು ಬೆಳೆಗಾರ ನಿಂಗಪ್ಪ ಸಂಕಷ್ಟವನ್ನು ತೋಡಿಕೊಂಡರು.

‘ಬೇಸಿಗೆಯಲ್ಲಿ 3-4 ತಿಂಗಳು ನಿಂಬೆಗೆ ಭಾರಿ ಬೇಡಿಕೆ ಇರುತ್ತದೆ. ಮಳೆಗಾಲದಲ್ಲಿ ಬೇಡಿಕೆ ಸ್ವಲ್ಪ ಕಡಿಮೆ ಹಾಗಾಗಿ ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ ಏರಿಳಿಕೆಯಲ್ಲಿ ಏನೇ ವ್ಯತ್ಯಾಸ ಆದರೂ ಪ್ರತಿ ಹಣ್ಣಿಗೆ ಒಂದು ರೂಪಾಯಿ ದರದಂತೆ 15 ಎಕರೆ ಬೆಳೆಯನ್ನು ಸ್ಥಳೀಯ ವರ್ತಕರ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಅವರು.

‘ಬೇಸಾಯ, ಕೂಲಿ, ಔಷಧ ಸೇರಿ ಬೆಳೆಗೆ ಅಧಿಕ ಬಂಡವಾಳ ಹಾಕಿ ಕೈಸುಟ್ಟುಕೊಂಡಿದ್ದೇನೆ. ಬ್ಯಾಂಕಿನ ಬೆಳೆ ಸಾಲದ ಬಡ್ಡಿ ಏರುತ್ತಲೇ ಇದೆ. ಸಾಲ ತೀರಿಸಲು ಮುಂದಿನ ದಾರಿ ತೋರುತ್ತಿಲ್ಲ’ ಎಂದು ನಿಂಗಪ್ಪ ಅಳಲು ತೋಡಿಕೊಂಡರು.

‘ಬೆಳಗೆರೆ, ಕಾಲುವೆಹಳ್ಳಿ, ರಂಗವ್ವನಹಳ್ಳಿ, ದುರ್ಗಾವರ, ಹಿರೇಹಳ್ಳಿ, ಜೋಗಿಹಟ್ಟಿ ಸೇರಿ ತಾಲ್ಲೂಕಿನಲ್ಲಿ 180 ಹೆಕ್ಟೆರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಿಂಬೆಗೆ ಬೇಡಿಕೆ ಹಾಗೂ ಬೆಲೆಯೂ ಹೆಚ್ಚಿದೆ. ಒಂದು ಗಿಡ ಕನಿಷ್ಠ ಸಾವಿರ ಹಣ್ಣು ನೀಡುತ್ತದೆ. ಇದು ವರ್ಷಪೂರ್ತಿ ಬೆಳೆ. ಹಾಗಾಗಿ ಪ್ರತಿ ನಿಂಬೆಹಣ್ಣಿಗೆ ಒಂದು ರೂಪಾಯಿ ಸಿಕ್ಕರೂ ರೈತರಿಗೆ ನಷ್ಟವಾಗುವುದಿಲ್ಲ. ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಸಾವಯವ –ಜೀವಾಮೃತ ಕೃಷಿಯಿಂದ ನಿಂಬೆ ಬೆಳೆದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ’ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಡಾ. ವಿರೂಪಾಕ್ಷಪ್ಪ ಹೇಳಿದರು.

***

ಮಾರುಕಟ್ಟೆಯಲ್ಲಿ ಈ ಬಾರಿ ಒಂದು ನಿಂಬೆಹಣ್ಣಿಗೆ ಕನಿಷ್ಠ ₹ 10-12 ಬೆಲೆ ಹಾಗೂ ಬೇಡಿಕೆಯೂ ಹೆಚ್ಚು ಇದೆ. ಆದರೆ ಇದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

–ನಿಂಗಪ್ಪ, ನಿಂಬೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT