ಗುರುವಾರ , ಏಪ್ರಿಲ್ 15, 2021
21 °C
ಚಿಂತಕ ಡಾ.ಬಂಜಗೆರೆ ಜಯಪ್ರಕಾಶ ಅಭಿಮತ

‘ಮತ್ತೆ ಕಲ್ಯಾಣ’ ಆಂದೋಲನಕ್ಕೆ ಜಾತಿಯ ಹಂಗಿಲ್ಲ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಲ್ಯಾಣದ ಕನಸು ಲಿಂಗಾಯತರಿಗೆ ಮಾತ್ರ ಸೀಮಿತವಾಗಿಲ್ಲ. ‘ಮತ್ತೆ ಕಲ್ಯಾಣ’ ಆಂದೋಲನ ಲಿಂಗಾಯತದ ಪುನರುಜ್ಜೀವೆಂದು ಯಾರೂ ಭಾವಿಸಬೇಕಾಗಿಲ್ಲ. ಇದು ಎಲ್ಲ ಜಾತಿಗಳನ್ನು ಒಳಗೊಳ್ಳುವ ಪ್ರಕ್ರಿಯೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ‘ಮತ್ತೆ ಕಲ್ಯಾಣ’ದ ಕುರಿತು ‘ಅರಿವಿನ ಚಾವಡಿ’ ಭಾನುವಾರ ಏರ್ಪಡಿಸಿದ್ದ ಮಾತುಕತೆಯಲ್ಲಿ ಅವರು ಮಾತನಾಡಿದರು.

‘ಕಲ್ಯಾಣದ ಕ್ರಾಂತಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಸಾಂಸ್ಕೃತಿಕ ಮೌಲ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಎಲ್ಲ ಜನವರ್ಗಗಳನ್ನು ಸೇರಿಸಿ ಅರಿವಿನ ಆಂದೋಲನ ನಡೆಸಲಾಗುತ್ತಿದೆ. ಜಾತಿಯನ್ನು ಸಂಘಟಿಸುವ ಪ್ರಯತ್ನ ಇದಲ್ಲ’ ಎಂದರು.

‘ಮತ್ತೊಬ್ಬರ ವಿರುದ್ಧ ಸ್ಪರ್ಧೆಗೆ ಪ್ರಚೋದಿಸುವ, ದಂಗೆ ಸಾರುವ ವಿಚಿತ್ರ ಸಾಂಸ್ಕೃತಿಕ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶೇಷವಾಗಿ ಯುವ ಮನಸುಗಳು ತಪ್ಪು ತಿಳಿವಳಿಕೆ ಹಾಗೂ ಗ್ರಹಿಕೆಯಲ್ಲಿವೆ. ಇಂತಹ ದಿಕ್ಕೇಡಿತನದ ನಡುವೆ ನಮ್ಮ ಸಹೋದರತೆ ಹಾಗೂ ಸಮಾನತೆಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಗತ್ಯವಿದೆ. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಲು ಉದಾತ್ತ ಚಿಂತನೆ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಶತಮಾನಗಳ ಹಿಂದೆ ದೇವರು ಹಾಗೂ ಧಾರ್ಮಿಕ ಆಚರಣೆಗಳು ಸರಳವಾಗಿದ್ದವು. ಜನಸಾಮಾನ್ಯರ ಆಹಾರವನ್ನೇ ದೇವರಿಗೆ ಅಪರ್ಣೆ ಮಾಡಲಾಗುತ್ತಿತ್ತು. ಭಕ್ತಿಯ ಹೆಸರಿನಲ್ಲಿ ಮೌಢ್ಯವನ್ನು ಮರುಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಅತ್ಯಾಧುನಿಕ ಮಾಧ್ಯಮ ಕೂಡ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪುರೋಹಿತಶಾಹಿ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ಜಾತಿ ನಿರ್ಣಾಯಕ ಶಕ್ತಿಯಾಗಿ ಬೆಳೆಯುತ್ತಿದೆ. ಸ್ನೇಹದ ಒಡನಾಟಕ್ಕೂ ಜಾತಿ ಹುಡುಕಲಾಗುತ್ತಿದೆ. ಮಾನಸಿಕ ಕಂದಕ ಆಳವಾಗುತ್ತಿದೆ. ಬದುಕಿನ ಬಗೆಗಿನ ಆತಂಕ, ತಲ್ಲಣಗಳನ್ನು ಬಳಸಿಕೊಂಡು ಮಾನಸಿಕ ಸಂಕೋಲೆ ನಿರ್ಮಿಸಲಾಗಿದೆ. ದುಡಿಯುವ ವರ್ಗವನ್ನು ಗೌರವಿಸಿ, ಕಂದಾಚಾರ ನಿರಾಕರಿಸಿದ ಕಲ್ಯಾಣದ ಆಶಯ ಎಲ್ಲರ ಚಿಂತನೆಯಲ್ಲಿ ಮರುಸ್ಥಾಪನೆಗೊಳ್ಳಬೇಕಿದೆ’ ಎಂದರು.

‘ಕ್ರಿ.ಶ 1ರಿಂದ 10ನೇ ಶತಮಾನದವರೆಗೆ ಕೃಷಿ, ಕುಶಲಕರ್ಮಿಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತ್ತು. ಜಾತಿ ವ್ಯವಸ್ಥೆ ರೂಪುಗೊಳ್ಳುವುದಕ್ಕೂ ಮೊದಲು ಸಹೋದರ ಪ್ರಜ್ಞೆಯಿಂದ ಬದುಕುತ್ತಿದ್ದರು. ಕಾಯಕ ಜೀವಿಗಳಿಗೆ ಪೂಜೆ ಹಾಗೂ ಕೆಲಸ ಒಂದೇ ಎಂಬ ಭಾವನೆ ಇತ್ತು. ದುಡಿಯದೇ ಊಟ ಮಾಡುವುದು ಪಾಪ ಎಂಬ ಪ್ರಜ್ಞೆ ಇತ್ತು’ ಎಂದು ವಿವರಿಸಿದರು.

‘ಕಾಲ ಕ್ರಮೇಣ ಜಾತಿ ಹಾಗೂ ಕುಲ ಆಧಾರಿತ ವ್ಯವಸ್ಥೆ ರೂಪುಗೊಂಡಿತು. ಅಂಬಿಗ, ಕಮ್ಮಾರ ಸೇರಿ ಹಲವು ಜಾತಿಗಳಿಗೆ ಸಾಮಾಜಿಕ ಮಾನ್ಯತೆ ಇರಲಿಲ್ಲ. 17ಕ್ಕೂ ಹೆಚ್ಚು ಜಾತಿಯ ಜನರು ಅಸ್ಪೃಶ್ಯರಾಗಿದ್ದರು. ಇಂತಹ ಸನ್ನಿವೇಶದಲ್ಲಿ ಕಲ್ಯಾಣದಲ್ಲಿ ಶುರುವಾದ ಚಳವಳಿ ಹೊಸ ಆತ್ಮವಿಶ್ವಾಸ ಬೆಳೆಸಿತು. ದೇಗುಲ ಹಾಗೂ ಪೂಜಾರಿಗಳ ಹಂಗಿನಿಂದ ಹೊರಬರುವ ಪ್ರಯತ್ನ ನಡೆಯಿತು. ಈ ಚಳವಳಿಯ ಆಶಯಗಳನ್ನು ಇಟ್ಟುಕೊಂಡು ಮತ್ತೆ ಹೊರಡಬೇಕಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು