ಶನಿವಾರ, ಸೆಪ್ಟೆಂಬರ್ 18, 2021
29 °C

‘ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡದೇ ವಂಚಿಸಿದ ಬಿಜೆಪಿ’: ಕಾಡುಗೊಲ್ಲ ಸಂಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ‘ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಗೊಲ್ಲ ಸಮುದಾಯದ ಪ್ರತಿ ಹಟ್ಟಿ–ಹಟ್ಟಿಗೆ ಭೇಟಿ ನೀಡಿ, ಪ್ರಚಾರ ನಡೆಸಿ ತಮ್ಮ ಸಮುದಾಯದ ಮತಗಳನ್ನು ಪಕ್ಷಕ್ಕೆ ಹಾಕಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ ಹಿರಿಯೂರು ಕ್ಷೇತ್ರ ಗೊಲ್ಲ ಸಮುದಾಯದ ಏಕೈಕ ಶಾಸಕಿಗೆ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದೇ ಬಿಜೆಪಿ ವಂಚಿಸಿದೆ’ ಎಂದು ಕಾಡುಗೊಲ್ಲ ಸಮುದಾಯದ ಹಿರಿಯ ಮುಖಂಡ ರೆಡ್ಡಿಹಳ್ಳಿ ಹಟ್ಟಿರುದ್ರಪ್ಪ ಆರೋಪಿಸಿದರು.

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗೊಲ್ಲರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಭ್ರಷ್ಟಾಚಾರ, ಅವ್ಯವಹಾರ ಮುಂತಾದ ದಂಧೆ ನಡೆಸುವರಿಗೆ ಸಚಿವ ಸ್ಥಾನದ ಮಾನ್ಯತೆ ನೀಡಲಾಗಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದು ಜನಪರ ಸೇವೆ ಮಾಡುತ್ತಿರುವವರನ್ನು ದೂರ ಇಟ್ಟಿರುವುದು ಸರಿಯೇ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು.

‘ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲವು ಸಾಧಿಸಲು ಬಿಜೆಪಿಗೆ ಗೊಲ್ಲ ಸಮುದಾಯದ ಮತಗಳು ಬೇಕಿದ್ದವು. ಚುನಾವಣೆಯ ನಂತರ ಸಮುದಾಯ ಲೆಕ್ಕಕ್ಕಿಲ್ಲದಂತಾಗಿದೆ. ತಾರತಮ್ಯ ನೀತಿ ಇದೇ ರೀತಿ ಮುಂದುವರಿದರೆ, ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಕಾಡುಗೊಲ್ಲ ಸಮುದಾಯದ ಬಿಜೆಪಿ ಮಂಡಲ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ಉಪ್ಪಾರಹಟ್ಟಿ ಜಿ.ಕೆ. ಈರಣ್ಣ, ಕಾಡುಗೊಲ್ಲ ಸಮುದಾಯ ಕಾಂಗ್ರೆಸ್, ಜೆಡಿಎಸ್ ಬಿಟ್ಟು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಕಾರಣ ಸಚಿವ ಸ್ಥಾನದ ಸಂಕಷ್ಟವನ್ನು ಎದುರಿಸಬೇಕಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಗೊಲ್ಲ ಸಮುದಾಯ ನೆಲೆಸಿರುವುದು ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷಕ್ಕೆ ಗೊತ್ತಿಲ್ಲ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನೈತಿಕತೆ ಬಿಜೆಪಿಗೆ ಇಲ್ಲ’ ಎಂದು ಹೇಳಿದರು.

ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಬಿ.ವಿ. ಸಿರಿಯಣ್ಣ, ದೇವೀರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಹಾಲಿಂಗಪ್ಪ, ಶಿವಣ್ಣ, ವೀರೇಶ್, ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ಶೇಖರಪ್ಪ, ಅಜ್ಜಪ್ಪ, ವೀರಭದ್ರಪ್ಪ, ಶಶಿಧರ, ರಂಗನಾಥ್, ಕ್ಯಾತಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.