ಮಂಗಳವಾರ, ಮಾರ್ಚ್ 21, 2023
23 °C
ಮುಖ್ಯಮಂತ್ರಿಗೆ ಪತ್ರ ಬರೆದ ಎಸ್.ನಿಜಲಿಂಗಪ್ಪ ಪುತ್ರ

ಮನೆಯನ್ನು ಸ್ಮಾರಕ ಮಾಡಿ, ಇಲ್ಲವೇ ಮಾರಾಟಕ್ಕೆ ಅನುಮತಿ ನೀಡಿ: ನಿಜಲಿಂಗಪ್ಪ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿ ರೂಪಿಸುವ ಪ್ರಕ್ರಿಯೆ ಚುರುಕುಗೊಳಿಸಿ; ಇಲ್ಲವೇ ಮಾರಾಟ ಮಾಡಲು ಅವಕಾಶ ಕಲ್ಪಿಸಿ’ ಎಂದು ನಿಜಲಿಂಗಪ್ಪ ಅವರ ಪುತ್ರ ಎಸ್‌.ಎನ್‌. ಕಿರಣ್‌ಶಂಕರ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ನಿವಾಸವನ್ನು ಸ್ಮಾರಕವಾಗಿಸುವಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘22 ವರ್ಷಗಳ ಹಿಂದೆ ನಿಧನರಾಗಿ‌ರುವ ನಿಜಲಿಂಗಪ್ಪ ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸಿ, ಸ್ಮಾರಕವಾಗಿ
ರೂಪಿಸುವುದಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದಾಗ ಚಿತ್ರದುರ್ಗದ ಜನರ ಜೊತೆ ನಾನೂ ಸಂತಸಪಟ್ಟಿದ್ದೆ. ಸರ್ಕಾರ ಹಲವು ಆದೇಶ ಹೊರಡಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈವರೆಗೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ’ ಎಂದು ಅವರು ಹೇಳಿದ್ದಾರೆ.

‘ಜಿಲ್ಲಾಧಿಕಾರಿಯವರು 7 ತಿಂಗಳಿಂದ ಯಾವುದೇ ಪ್ರಕ್ರಿಯೆ ಪೂರ್ಣಗೊ‌ಳಿಸಿಲ್ಲ. ಮನೆಯನ್ನು ಖರೀದಿಸಿ ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ತೊಡಕುಗಳು ಎದುರಾದಾಗ ಅವರೊಂದಿಗೆ ಹಲವು ಬಾರಿ ಚರ್ಚಿಸಲಾಗಿದೆ. ಪುತ್ರ ಎಸ್‌.ಕೆ. ವಿನಯ್‌ ಅಮೆರಿಕದಿಂದ ಬಂದು 20 ದಿನ ಕಾದಿದ್ದಾರೆ. ಆದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ’ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

‘ವಿಧಾನಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ ಅವರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಗಮನ ಸೆಳೆದಿದ್ದೆವು. ಅವರ ಸೂಚನೆಯ ಮೇರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆ. 23ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ. ಆದರೆ, ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಅವರು ದೂರಿದ್ದಾರೆ.

ನಿಜಲಿಂಗಪ್ಪ ಅವರ ಮನೆ ಪುತ್ರ ಕಿರಣ್‌ಶಂಕರ್ ಹೆಸರಲ್ಲಿ ಖಾತೆಯಾಗಿದೆ. ಮೊಮ್ಮಗ ವಿನಯ್ ಹೆಸರಿನಲ್ಲಿ ವಿಲ್ ಇದೆ. ಕಾನೂನು ತೊಡಕು ನಿವಾರಿಸಿಕೊಂಡು ಬರುವಂತೆ ಕುಟುಂಬಕ್ಕೆ ಸಲಹೆ ನೀಡಲಾಗಿದೆ. ಆದರೆ, ಅವರು ಸಮಸ್ಯೆ ಬಗೆಹರಿಸಿಕೊಂಡು ಬಂದಿಲ್ಲ. ಈಗಿರುವ ಸ್ಥಿತಿಯಲ್ಲಿ ಮನೆ ಖರೀದಿಸಿ, ಸರ್ಕಾರಕ್ಕೆ ನೋಂದಣಿ ಮಾಡಲು ಉಪನೋಂದಣಾಧಿಕಾರಿ ಒಪ್ಪುತ್ತಿಲ್ಲ.
–ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು