ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಕೋಟಿ ಬಂಡವಾಳಕ್ಕೆ ರಿಯಾಯಿತಿ

ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪನೆಗೆ ವಿಫುಲ ಅವಕಾಶ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್
Last Updated 27 ಜನವರಿ 2021, 16:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲೆಯಲ್ಲಿ ₹1 ಸಾವಿರ ಕೋಟಿಯಿಂದ ₹1.5 ಸಾವಿರ ಕೋಟಿ ಬಂಡವಾಳ ಹೂಡುವ ಮೂಲಕ ಕೈಗಾರಿಕೆ ಸ್ಥಾಪಿಸಲು ಮುಂಬರುವ ಆಸಕ್ತ ಉದ್ಯಮಿಗಳಿಗೆ ಕೈಗಾರಿಕಾ ನೀತಿ ಹೊರತುಪಡಿಸಿ ವಿಶೇಷ ರಿಯಾಯಿತಿ ನೀಡಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್ ಹೇಳಿದರು.

ಇಲ್ಲಿ ಬುಧವಾರ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕಾ ಉದ್ಯಮಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಮಿತಿಮೀರಿ ಕೈಗಾರಿಕಾ ಅಭಿವೃದ್ಧಿಯಾಗಿರುವ ಕಾರಣ ತುಮಕೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತು ನೀಡಲಾಗುತ್ತಿದೆ’ ಎಂದರು.

‘ನೂತನ ಕೈಗಾರಿಕಾ ನೀತಿ 2020-2025ರ ಅನ್ವಯ ರಾಜಧಾನಿ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಲ್ಲೂ ಉದ್ಯಮಗಳ ಸ್ಥಾಪನೆಗೆ ವಿಫುಲ ಅವಕಾಶಗಳಿವೆ’ ಎಂದು ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬೆಂಗಳೂರಿನಿಂದ ಮುಂಬೈವರೆಗೂ ಕೈಗಾರಿಕಾ ಕಾರಿಡಾರ್ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4, 13, 48ರಲ್ಲಿ ಸರಕು, ಸಾಗಾಣೆಗೆ ಅನುಕೂಲಕರವಾಗಿದೆ. ಕೈಗಾರಿಕಾ ಪ್ರಗತಿ ಸಾಧಿಸಲು ಸಹಕಾರಿಯಾಗಿವೆ’ ಎಂದರು.

‘ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಭೂಸ್ವಾಧೀನದಿಂದಾಗಿ ವಿಳಂಬವಾಗುತ್ತಿದೆ. ಇದರ ಪ್ರಗತಿಯ ವೇಗ ಹೆಚ್ಚಿಸುವುದರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಪ್ರಯಾಣ, ಸರಕು ಸಾಗಾಣಿಕೆಗೂ ಸಹಕಾರಿಯಾಗಲಿದೆ. ಇದರಿಂದ ಕೈಗಾರಿಕಾಭಿವೃದ್ಧಿ ಸಾಧ್ಯವಿದ್ದು, ಸರ್ಕಾರದೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಎಂಟು ಕೈಗಾರಿಕಾ ವಸಾಹತು ಸ್ಥಾಪಿಸಲಾಗಿದೆ. ಕೆಳಗೋಟೆ ಎರಡನೇ ಹಂತದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾಧಕ-ಬಾಧಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ದೊಡ್ಡ ಉಳ್ಳಾರ್ತಿ ಮತ್ತು ಕುದಾಪುರದಲ್ಲಿ ಕೈಗಾರಿಕೆ ವಲಯ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಹತ್ತು ಬೃಹತ್ ಕೈಗಾರಿಕೆಗಳಿದ್ದು, ಎರಡು ತಾತ್ಕಾಲಿಕವಾಗಿ ಮುಚ್ಚಿವೆ. ಹಿರಿಯೂರಿನಲ್ಲಿ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಶಾಸಕರು ಮನವಿ ಮಾಡಿದ್ದಾರೆ. ಇದರಿಂದ ಬಡವರಿಗೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿದೆ’ ಎಂದು ತಿಳಿಸಿದರು.

‘ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಸುಮಾರು 106 ಎಕರೆ ಪ್ರದೇಶದಲ್ಲಿ ಅಕ್ಷಯ ಫುಡ್ ಪಾರ್ಕ್ ಸ್ಥಾಪಿಸಲಾಗಿದೆ. ಕಡಿಮೆ ದರಕ್ಕೆ ದಶಕದ ಹಿಂದೆ ಭೂಮಿ ಪಡೆದಿದ್ದಾರೆ. ಅಲ್ಲದೆ, ಸರ್ಕಾರದಿಂದ ₹5 ಕೋಟಿ ಸಬ್ಸಿಡಿ ಪಡೆದರೂ ರಸ್ತೆ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಿಲ್ಲ. ನಿಯಮ ಉಲ್ಲಂಘಿಸಿರುವ ಕಾರಣ ತ್ವರಿತವಾಗಿ ನೋಟಿಸ್‌ ಜಾರಿಗೊಳಿಸಿ. ಭೂಮಿ ಹಿಂಪಡೆಯಲು ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಜಗದೀಶ್‌ ಶೆಟ್ಟರ್ ಸೂಚಿಸಿದರು.

ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್‌ಪ್ರಸಾದ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್ ಇದ್ದರು.

***

ಉನ್ನತ ಶಿಕ್ಷಣ, ಉದ್ಯೋಗಿನಿ, ಮುದ್ರಾ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ.

–ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT