ಸೋಮವಾರ, ಜೂನ್ 21, 2021
27 °C
ಡಿ.ಕೆ.ಶಿವಕುಮಾರ್‌ಗೆ ಸಚಿವ ಬೈರತಿ ಬಸವರಾಜ್‌ ಸವಾಲು

ಅನ್ನಕ್ಕೆ ಕನ್ನ ಹಾಕಿದ್ದಕ್ಕೆ ದಾಖಲೆ ಕೊಡಿ: ಡಿಕೆಶಿಗೆ ಬೈರತಿ ಬಸವರಾಜ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಡವರಿಗೆ ನೀಡುವ ಅನ್ನಕ್ಕೆ ಸರ್ಕಾರ ಕನ್ನ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.

ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಬಡವರಿಗೆ ಅನ್ನ ತಲುಪಿಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಈ ಅನ್ನಕ್ಕೂ ಕನ್ನ ಹಾಕುವ ಪ್ರಶ್ನೆಯೇ ಇಲ್ಲ’ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳನ್ನು ಭದ್ರತೆಯ ದೃಷ್ಟಿಯಿಂದ ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ರಾಮನಗರದ ಪರಿಸ್ಥಿತಿಯನ್ನು ಹಾಳು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಆರೋಪಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ಕೈಬಿಡಬೇಕು’ ಎಂದರು.

‘ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಅನುಷ್ಠಾನಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜನರು ಅನಗತ್ಯವಾಗಿ ತಿರುಗಾಡುವುದು ತಪ್ಪು. ಸರ್ಕಾರದ ನಿಯಮಗಳನ್ನು ಜನರು ಪಾಲಿಸಬೇಕು. ಮಾಸ್ಕ್‌ ಧರಿಸುವ ಹಾಗೂ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ನಿರ್ಮೂಲನೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಹಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ಚಿತ್ರದುರ್ಗ ನಗರದ ಸಮಸ್ಯೆ, ಜನರ ನಿರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದೇನೆ. ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಹೇಳಿದರು.

‘ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಕೆರೆಯ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ. ಐತಿಹಾಸಿಕ ಕೋಟೆಗೆ ಸಾಗಲು ರಸ್ತೆ ಅಗತ್ಯವಿದೆ ಎಂಬುದು ಗಮನಕ್ಕೆ ಬಂದಿದೆ. ₹ 56 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು. ಜನರಿಗೆ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಸಚಿವನಾಗಿ ಶ್ರಮಿಸಲಿದ್ದೇನೆ’ ಎಂದು ಆಶ್ವಾಸನೆ ನೀಡಿದರು.

ಮುರುಘಾ ಶರಣರಿಗೆ ಕೃತಜ್ಞತೆ

ಹಸಿದವರಿಗೆ ಅನ್ನ ನೀಡುವ ಮುರುಘಾ ಮಠದ ಕಾರ್ಯ ಶ್ಲಾಘನೀಯ. ಪ್ರಬುದ್ಧ ಆಲೋಚನೆ ಮತ್ತು ಮಾನವೀಯ ಕಳಕಳಿ ಹೊಂದಿದ ಶಿವಮೂರ್ತಿ ಮುರುಘಾ ಶರಣರಿಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವ ಬೈರತಿ ಬಸವರಾಜ್‌ ಹೇಳಿದರು.

ಮುರುಘಾ ಮಠದಲ್ಲಿ ಬುಡ್ಡ ಜನಾಂಗ, ಹಗಲುವೇಷ, ಕಾಡಸಿದ್ಧರು ಹಾಗು ಮಂಗಳಮುಖಿಯರಿಗೆ ಆಹಾರ ಧಾನ್ಯ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುರುಘಾ ಶರಣರು ಮೊದಲಿನಿಂದಲೂ ವಿಭಿನ್ನವಾಗಿ ಆಲೋಚಿಸುತ್ತ ಬಸವ ತತ್ವ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಇದರಲ್ಲಿ ಯಶಸ್ವಿ ಪಡೆಯುತ್ತಿದ್ದಾರೆ. ಜನರಲ್ಲಿ ಜಾಗೃತಿ, ಕಾಯಕ ಪ್ರಜ್ಞೆ ಮೂಡಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳಮುಖಿ ಲತೀಕ್ ಮಾತನಾಡಿ, ‘ಮಂಗಳಮುಖಿಯನ್ನು ಸಮಾಜ ಭಿಕ್ಷುಕರಂತೆ ಉಪಚರಿಸುತ್ತದೆ. ಶ್ರೀಮಠ ಮಂಗಳಮುಖಿಯರನ್ನು ಗುರುತಿಸಿ ಅನ್ನ ನೀಡುತ್ತಿರುವುದು ಸಂತಸದ ಸಂಗತಿ’ ಎಂದರು.

ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು