ಶನಿವಾರ, ಜುಲೈ 31, 2021
28 °C
ಶಿಷ್ಟಾಚಾರ ಉಲ್ಲಂಘನೆ, ಹಕ್ಕು ಚ್ಯುತಿ ಆರೋಪ

ಶ್ರೀರಾಮುಲು ವಿರುದ್ಧ ಶಾಸಕ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವೇದಾವತಿ ನದಿಗೆ ಬಾಗೀನ ಅರ್ಪಿಸುವ ಸಮಾರಂಭಕ್ಕೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸ್ಥಳೀಯ ಶಾಸಕರ ಹಕ್ಕಿಗೆ ಚ್ಯುತಿಯುಂಟು ಮಾಡಿದ್ದಾರೆ ಎಂದು ಶಾಸಕ ಟಿ. ರಘುಮೂರ್ತಿ ಆರೋಪಿಸಿದರು.

‘ಪರಶುರಾಂಪುರ ಸಮೀಪದ ಕೋಟೆಕೆರೆ ಬ್ಯಾರೇಜ್‌ ಬಳಿ ಜೂನ್‌ 2ರಂದು ಬಾಗೀನ ಅರ್ಪಿಸಲಾಗಿದೆ. ಒಂದು ದಿನ ಮುಂಚಿತವಾಗಿಯೇ ಸಮಾರಂಭ ನಿಗದಿಯಾಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರಿ ಯಂತ್ರಾಂಗವನ್ನು ಬಳಸಿಕೊಂಡು ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ವಿಧಾನಪರಿಷತ್‌ ಸದಸ್ಯೆ ಜಯಮ್ಮ ಅವರಿಗೂ ಆಹ್ವಾನ ಇರಲಿಲ್ಲ. ಬಾಗೀನ ಅರ್ಪಿಸಿದ್ದು ಸರ್ಕಾರಿ ಕಾರ್ಯಕ್ರಮವೇ ಅಥವಾ ಖಾಸಗಿಯೇ ಎಂಬುದು ಜಿಲ್ಲಾಡಳಿತ ಸ್ಪಷ್ಟಪಡಿಸುವ ಅಗತ್ಯವಿದೆ’ ಎಂದು ಒತ್ತಾಯಿಸಿದರು.

‘ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪದೇ ಪದೇ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಸಚಿವರು ಪಾಲ್ಗೊಳ್ಳುವ ಬಹುತೇಕ ಸರ್ಕಾರಿ ಸಮಾರಂಭದ ವೇದಿಕೆಯಲ್ಲಿ ಅವರ ಹಿಂಬಾಲಕರು ಆಸೀನರಾಗಿರುತ್ತಾರೆ. ಶಾಸಕ ಸ್ಥಾನದ ಘನತೆಗೆ ದಕ್ಕೆಯುಂಟು ಮಾಡುತ್ತಿದ್ದಾರೆ. ಇದರಲ್ಲಿ ಉದ್ದೇಶಪೂರ್ವಕ ರಾಜಕಾರಣ ಅಡಗಿದೆ’ ಎಂದು ಕಿಡಿಕಾರಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದಕ್ಕೆ ಹಲವು ನೀತಿ, ನಿಯಮ ರೂಪಿಸಿದೆ. ಮದುವೆಯಂತಹ ಸಮಾರಂಭಕ್ಕೆ ಇಷ್ಟೇ ಜನರು ಪಾಲ್ಗೊಳ್ಳಬೇಕು ಎಂಬ ನಿರ್ಬಂಧ ವಿಧಿಸಿದೆ. ಆದರೆ, ಸಚಿವರು ನಡೆಸಿದ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಮಾಸ್ಕ್ ಹಾಗೂ ಅಂತರ ಕಾಪಾಡುವ ನಿಯಮ ಗಾಳಿಗೆ ತೂರಿದರು. ಇಂತಹ ಸಂದರ್ಭದಲ್ಲಿ ಸಚಿವರು ಹೊಣೆಗಾರಿಕೆ ಪ್ರದರ್ಶಿಸಬೇಕಿತ್ತು’ ಎಂದರು.

‘ಯಾವ ಹೋರಾಟ ಮಾಡಿದ್ದರು?’: 

ತುಂಗ–ಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸೇರ್ಪಡೆ ಮಾಡುವಂತೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಯಾವ ಹೋರಾಟ ಮಾಡಿದ್ದರು ಎಂದು ರಘುಮೂರ್ತಿ ಪ್ರಶ್ನಿಸಿದರು.

‘ತುಂಗ–ಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಯೋಜನೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನುಷ್ಠಾನಗೊಂಡಿದೆ. ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ನೀರು ಒದಗಿಸಲು ಉದ್ದೇಶಿಸಲಾಗಿದೆ. ಚಳ್ಳಕೆರೆ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಬಿಎಸ್‌ಆರ್‌ ಹಾಗೂ ಜೆಡಿಎಸ್‌ ಶಾಸಕರಿದ್ದರು. ಕುಡಿಯುವ ನೀರಿನ ಯೋಜನೆಯಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ. ಅಪಪ್ರಚಾರ ಮಾಡಿದರೆ ಸಹಿಸುವುದಿಲ್ಲ’ ಎಂದು ಗುಡುಗಿದರು.

‘ಕಾಂಗ್ರೆಸ್‌ ಪಕ್ಷ ಬಿಡಲ್ಲ’:

ಸಚಿವನಾಗಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಪಹಪಿಕೆ ಇಲ್ಲ. ರಾಜಕೀಯ ಜೀವನ ಅಂತ್ಯವಾಗುವವರೆಗೂ ಕಾಂಗ್ರೆಸ್‌ ಪಕ್ಷದಲ್ಲೇ ಇರುತ್ತೇನೆ ಎಂದು ರಘುಮೂರ್ತಿ ಸ್ಪಷ್ಟನೆ ನೀಡಿದರು.

‘ಚಿತ್ರದುರ್ಗದ ಶಾಸಕರೊಬ್ಬರು ಬಿಜೆಪಿಗೆ ಬರಲಿದ್ದಾರೆ’ ಎಂಬ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

‘ಜಾರಕಿಹೊಳಿ ಅವರು ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದ್ದವರು. ಅವರೊಂದಿಗೆ ಆತ್ಮೀಯ ಒಡನಾಟವಿತ್ತು. ಅವರು ಏಕೆ ಹೀಗೆ ಮಾತನಾಡಿದರು ಎಂಬುದು ಗೊತ್ತಿಲ್ಲ. ನಾನು ಪಕ್ಷ ನಿಷ್ಠೆ ಹೊಂದಿದ್ದೇನೆ ಹೊರತು ವ್ಯಕ್ತಿ ನಿಷ್ಠೆ ಅಲ್ಲ’ ಎಂದರು.

ವಿಧಾನಪರಿಷತ್‌ ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸದಸ್ಯ ಪ್ರಕಾಶಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.