ಬುಧವಾರ, ನವೆಂಬರ್ 20, 2019
22 °C
ಪೌರಾಯುಕ್ತರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ

ರಸ್ತೆ ಮುಚ್ಚದಿದ್ದರೆ ಪ್ರಕರಣ ದಾಖಲಿಸಿ

Published:
Updated:
Prajavani

ಚಿತ್ರದುರ್ಗ: ಒಳಚರಂಡಿ ನಿರ್ಮಾಣ ಕಾಮಗಾರಿ ಮುಕ್ತಾಯವಾದ ಬಳಿಕವೂ ಅಗೆದ ಸಿ.ಸಿ. ರಸ್ತೆ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಪೌರಾಯುಕ್ತ ಹನುಮಂತರಾಜು ಅವರಿಗೆ ಸೂಚನೆ ನೀಡಿದರು.

ಇಲ್ಲಿನ ಯಂಗಮ್ಮನಕಟ್ಟೆ–ಸಹ್ಯಾದ್ರಿ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಥಳ ಪರಿಶೀಲನೆ ನಡೆಸಿದಾಗ ಸಿ.ಸಿ.ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಕುಪಿತಗೊಂಡ ಅವರು ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿರ್ಮಾಣ ಮಂಡಳಿಯ ಮುಖ್ಯ ಎಂಜಿನಿಯರ್‌ ಕೇಶವ್‌ ಎಂಬುವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ‘ಲೋಪ ಎಸಗಿದ ಗುತ್ತಿಗೆದಾರರ ವಿರುದ್ಧ ಈವರೆಗೆ ಏಕೆ ಶಿಸ್ತುಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಕಾಮಗಾರಿ ಕೈಗೊಳ್ಳುವ ಮುನ್ನ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಗೆದ ರಸ್ತೆಗಳನ್ನು ಪುನರ್‌ ನಿರ್ಮಿಸುವ ಹೊಣೆ ಗುತ್ತಿಗೆದಾರರ ಮೇಲೆ ಇರುತ್ತದೆ. ಇದಕ್ಕೆ ಪ್ರತ್ಯೇಕ ಅನುದಾನ ಕೂಡ ಇರುತ್ತದೆ. ಆದರೆ, ರಸ್ತೆಗಳು ಮಾತ್ರ ಮೊದಲಿನ ಸ್ಥಿತಿಗೆ ಬರುತ್ತಿಲ್ಲ. ಎಚ್ಚರಿಕ ನೀಡಿದರೂ ಗುತ್ತಿಗೆದಾರರು ಧೋರಣೆ ಬದಲಿಸಿಕೊಂಡಿಲ್ಲ’ ಎಂದು ಹರಿಹಾಯ್ದರು.

33, 34 ಹಾಗೂ 35ನೇ ವಾರ್ಡ್‌ ವ್ಯಾಪ್ತಿಯ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಸಹ್ಯಾದ್ರಿ ಬಡಾವಣೆಯ ಮುಖ್ಯ ರಸ್ತೆಗೆ ₹ 40 ಲಕ್ಷ ಅನುದಾನ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಎಂಜಿನಿಯರ್‌ ರವಿ, ವಕೀಲರಾದ ಅಶ್ವಥನಾಯಕ, ಕಲ್ಲಹಳ್ಳಿ ಸುರೇಶ್, ಸ್ಥಳೀಯ ನಿವಾಸಿ ಸೀನಪ್ಪ ಇದ್ದರು.

ಪ್ರತಿಕ್ರಿಯಿಸಿ (+)