ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಮುಸ್ಲಿಮರಿಲ್ಲದ ಊರಲ್ಲಿ 'ಮೊಹರಂ' ವಿಶೇಷ

Published 1 ಆಗಸ್ಟ್ 2023, 6:55 IST
Last Updated 1 ಆಗಸ್ಟ್ 2023, 6:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಸ್ಲಿಮರೇ ಇಲ್ಲದ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಸೋಮವಾರ ಹಿಂದೂಗಳೇ ಊರ ಹಬ್ಬದಂತೆ ಮೊಹರಂ ಆಚರಿಸುವ ಮೂಲಕ ಭಾವೈಕ್ಯ ಮೆರೆದರು.‌ ಮೊಹರಂ (ಪೀರಲ ಹಬ್ಬ) ಆಚರಿಸುವ ಗ್ರಾಮಗಳಲ್ಲಿ ಬಚ್ಚಬೋರನಹಟ್ಟಿ ಗ್ರಾಮ ಮುಂಚೂಣಿಯಲ್ಲಿದ್ದು, ಸಂಭ್ರಮದಿಂದ ಹಬ್ಬ ಆಚರಿಸಿದರು.

ಅಮಾವ್ಯಾಸೆಯ ಮೂರು ದಿನದ ನಂತರ ಭೂಮಿ ಪೂಜೆ ನೆರವೇರಿಸುವ ಮೂಲಕ ಪೀರಲ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ನಂತರ ಪೆಟ್ಟಿಗೆಯಲ್ಲಿನ ದೇವರುಗಳನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹೀಗೆ ಹತ್ತು ದಿನಗಳ ಕಾಲ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು.

ಪೀರಲ ಹಬ್ಬದ ಕೊನೆ ದಿನ ಭಾನುವಾರ ರಾತ್ರಿ ಗ್ರಾಮಸ್ಥರು ಮಂಡಕ್ಕಿ, ಸಕ್ಕರೆ, ಬೆಲ್ಲ, ನೈವೇದ್ಯ ಮಾಡಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ದೇವರನ್ನು ಬೇಡಿಕೊಳ್ಳುತ್ತಾರೆ. ಹರಕೆ ಹೊತ್ತ ಕೆಲವರು ರಾತ್ರಿ ಇಡೀ ಸ್ತ್ರೀ ವೇಷ, ಕರಡಿ ಕುಣಿತದಂತಹ ವೇಷಗಳನ್ನು ತೊಟ್ಟು ಗಮನ ಸೆಳೆದರು.

ಪೀರಲ ಹಬ್ಬವನ್ನು ಹಿಂದೂ–ಮುಸ್ಲಿಂ ಇಬ್ಬರೂ ಒಟ್ಟಾಗಿ ಆಚರಣೆ ಮಾಡುವುದು ವಾಡಿಕೆ. ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರಿಂದ ನಗರದಿಂದ ಮುಸ್ಲಿಂ ಸಮುದಾಯದವರನ್ನು ಆಹ್ವಾನಿಸಿ ಧಾರ್ಮಿಕ ಕಾರ್ಯ ನೆರವೇರಿಸಿದರು. ಹಬ್ಬದ ಆಚರಣೆಯಲ್ಲಿ ವಿಶೇಷ ವೇಷಧಾರಿಗಳು ಗಮನಸೆಳೆದರು.‌

ಹಬ್ಬದ ಆಚರಣೆ ಅಂಗವಾಗಿ ಹರಕೆ ಹೊತ್ತಿರುವ ‘ಅಳ್ಳೊಳ್ಳಿ ಬುಕ್ಕಾ’ ಹಾಗೂ ಕರಡಿ, ಸ್ತ್ರೀ ವೇಷಧಾರಿಗಳು ಗೆಜ್ಜೆ ಅಲುಗಾಡಿಸುತ್ತ ಓಣಿಯಲ್ಲಿ ಬಂದರೆ ಸಾಕು ಹತ್ತಾರು ಮಕ್ಕಳು ವೇಷಧಾರಿಗಳ ಹಿಂದೆ ಓಡುತ್ತಾರೆ. ‘ಅಳ್ಳೊಳ್ಳಿ ಬುಕ್ಕಾ’ ಗದರಿಸಿದಾಕ್ಷಣ ಹಿಂದಕ್ಕೆ ಬರುವ ಮಕ್ಕಳು, ಮತ್ತೆ ಹಿಂಬಾಲಿಸಿ ಮನೋರಂಜನೆ ಪಡೆಯುತ್ತಾರೆ. ವೇಷಧಾರಿಗಳು ಹಾಸ್ಯಮಯ ನೃತ್ಯದಿಂದ ಜನರನ್ನು ಮನರಂಜಿಸಿದರು.

ಭಾನುವಾರ ರಾತ್ರಿ ಗ್ರಾಮದ ಮಸೀದಿ ಮುಂಭಾಗದ ಗುಣಿಯಲ್ಲಿ ಹರಕೆಹೊತ್ತವರು ತಂದು ಹಾಕುವ ಕಟ್ಟಿಗೆ, ಮರದ ದಿಮ್ಮಿಗಳಿಂದ ಕೆಂಡ ಮಾಡಲಾಯಿತು. ಸೋಮವಾರ ಬೆಳಗಿನ ಜಾವ ಮತ್ತು ಸಂಜೆ ದೇವರ ಹೊತ್ತು ಕೆಂಡ ಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣೆಗೆ ನಡೆಸಿ, ದೇವರುಗಳನ್ನು ನೀರಿಗೆ ಹಾಕುವ ಮೂಲಕ ಮೊಹರಂ ಹಬ್ಬಕ್ಕೆ ತೆರೆ ಬಿದ್ದಿತು.

ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ‘ಅಳ್ಳೊಳ್ಳಿ ಬುಕ್ಕಾ’ ಮೆರವಣಿಗೆ
ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ‘ಅಳ್ಳೊಳ್ಳಿ ಬುಕ್ಕಾ’ ಮೆರವಣಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT