ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಂಆರ್‌ 2ನೇ ಸುತ್ತಿನ ಸಮೀಕ್ಷೆ: ಮತ್ತೆ 400 ಮಾದರಿ ಸಂಗ್ರಹ

Last Updated 25 ಆಗಸ್ಟ್ 2020, 15:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಸಮುದಾಯಕ್ಕೆ ವಿಸ್ತರಣೆಯಾಗಿರುವ ಸಧ್ಯದ ಪರಿಸ್ಥಿತಿಯ ಮನವರಿಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹಮ್ಮಿಕೊಂಡಿರುವ ‘ನ್ಯಾಷನಲ್‌ ಜಿರೊ ಸರ್ವೆಲೆನ್ಸ್‌ ಫಾರ್‌ ಕೋವಿಡ್‌–19’ನ ಎರಡನೇ ಸುತ್ತಿನ ಸಮೀಕ್ಷೆ ಜಿಲ್ಲೆಯಲ್ಲಿ ಮಂಗಳವಾರ ನಡೆಯಿತು.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಆಯ್ದ 10 ಸ್ಥಳಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಯಿತು. ರಾಷ್ಟ್ರೀಯ ಕ್ಷಯ ರೋಗ ಸಂಶೋಧನಾ ಸಂಸ್ಥೆಯ 30 ಜನರ ತಂಡ 400 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿತು. ದೇಶದ 25 ರಾಜ್ಯಗಳ 82 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸಮೀಕ್ಷೆ ನೆಡೆಯುತ್ತಿದೆ.

ಹಿರಿಯೂರು ತಾಲ್ಲೂಕಿನ ಭರಮಗಿರಿ, ಮೊಳಕಾಲ್ಮುರು ತಾಲ್ಲೂಕಿನ ಕಾಟನಾಯಕನಹಟ್ಟಿ, ಚಿತ್ರದುರ್ಗ ತಾಲ್ಲೂಕಿನ ವಡ್ಡನಹಳ್ಳಿ, ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ನಗರದ ವಾರ್ಡ್ ಸಂಖ್ಯೆ 5, ಹಿರೆಕಂದವಾಡಿ, ಚಳ್ಳಕೆರೆ ತಾಲ್ಲೂಕಿನ ಘಟಪರ್ತಿ, ಪರಶುರಾಂಪುರ ಹಾಗೂ ಚಳ್ಳಕೆರೆ ನಗರದ ವಾರ್ಡ್ ಸಂಖ್ಯೆ 22, ಹೊಸದುರ್ಗ ತಾಲ್ಲೂಕಿನ ತುಂಬಿನಕೆರೆ, ಹಾಗಲಕೆರೆಯಲ್ಲಿ ಸಮೀಕ್ಷೆ ನಡೆಯಿತು.

ಸಮೀಕ್ಷೆಯ ಉದ್ದೇಶಕ್ಕೆ ನಾಲ್ಕು ಕ್ಲಸ್ಟರ್‌ಗಳನ್ನು ನಿರ್ಮಿಸಲಾಗಿತ್ತು. ರ‍್ಯಾಂಡಮ್‌ (ಯಾದೃಚ್ಛಿಕ) ಮಾದರಿಯಲ್ಲಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅನುಮತಿ ನೀಡಿದ ವ್ಯಕ್ತಿಗೆ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಯಿತು. ಬಳಿಕ 4.5 ಎಂಎಲ್‌ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು.

ರಾಜ್ಯದಲ್ಲಿ ಕಲಬುರ್ಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲ ಸುತ್ತಿನ ಕೋವಿಡ್-19 ಪರೀಕ್ಷೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ. ಮಂಗಳವಾರ 2ನೇ ಸುತ್ತಿನಲ್ಲಿ 400 ಮಾದರಿ ಸಂಗ್ರಹಿಸಲಾಗಿದ್ದು ಫಲಿತಾಂಶ ಬರಬೇಕಿದೆ.

ಸಮೀಕ್ಷಾ ಕಾರ್ಯದಲ್ಲಿ ರಾಜ್ಯ ನೋಡಲ್ ಅಧಿಕಾರಿ ಡಾ.ನಿರ್ಮಲಾ, ಡಾ.ಚೇತನಾ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆರ್.ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT