ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ಹೆಸರು ಬೆಳೆಗೆ ಹಳದಿ ರೋಗ: ರೈತ ಕಂಗಾಲು

ಹೊಸದುರ್ಗ ತಾಲ್ಲೂಕಿನ 480 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ
Published 25 ಜೂನ್ 2024, 6:29 IST
Last Updated 25 ಜೂನ್ 2024, 6:29 IST
ಅಕ್ಷರ ಗಾತ್ರ

ಹೊಸದುರ್ಗ: ಈ ಬಾರಿ ಮುಂಗಾರು ಸಮರ್ಪಕವಾಗಿ ಸುರಿಯದಿದ್ದರೂ ರೈತರು ಹೆಸರು ಬಿತ್ತನೆ ಮಾಡಿದ್ದು, ಚೋಟುದ್ದ ಬೆಳೆದಿರುವ ಬೆಳೆಗೆ ಹಳದಿ ರೋಗ ಆವರಿಸಿದೆ.

ತಡವಾಗಿಯಾದರೂ ಉತ್ಸಾಹದಿಂದ ಹೆಸರು ಬಿತ್ತನೆ ಮಾಡಿರುವ ರೈತರಲ್ಲಿ ಈ ಹಳದಿ ರೋಗ ಆತಂಕ ಉಂಟುಮಾಡಿದೆ.

ಪ್ರತಿ ವರ್ಷ ತಾಲ್ಲೂಕಿನಾದ್ಯಂತ ಸಾಮಾನ್ಯವಾಗಿ 4,500 ಹೆಕ್ಟೇರ್‌ನಿಂದ 4,600 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿ, ಉತ್ತಮ ಇಳುವರಿ ಬರುತ್ತಿತ್ತು. ಆದರೆ, ಈ ಬಾರಿ ಮಳೆ ತಡವಾದ ಕಾರಣ ಕೇವಲ 480 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದೀಗ ರೋಗ ಕಾಣಿಸಿಕೊಂಡಿರುವುದು ರೈತರ ಚಿಂತೆ ಹೆಚ್ಚಿಸಿದೆ.

ಈ ಬಾರಿ ಕಸಬಾ ಹೋಬಳಿಯಲ್ಲಿ 170 ಹೆಕ್ಟೇರ್‌, ಮಾಡದಕೆರೆ–30 ಹೆಕ್ಟೇರ್‌, ಮತ್ತೋಡು–130, ಶ್ರೀರಾಂಪುರ– 150 ಹೆಕ್ಟೇರ್‌ ಸೇರಿದಂತೆ 480 ಹೆಕ್ಟೇರ್‌ ಮಾತ್ರ ಹೆಸರು ಬಿತ್ತನೆಯಾಗಿದೆ. ಹೆಸರು ಬಿತ್ತನೆಯಾಗುತ್ತಿದ್ದ ಜಮೀನುಗಳಲ್ಲಿ ಸಾವೆ ಬಿತ್ತಲಾಗಿದೆ.

ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ನೀಡುವ ಹೆಸರು ಬೆಳೆ ತನ್ನದೇ ವಿಸ್ತೀರ್ಣ ಹೊಂದಿದೆ. ಗಿಡಗಳ ಎಲೆಗಳಲ್ಲಿ ಸಣ್ಣ ಚುಕ್ಕಿಗಳಿದ್ದು, ಹಳದಿ ಬಣ್ಣಕ್ಕೆ ತಿರುಗಿವೆ. ಇನ್ನೂ ಹೂಗಳು ದಷ್ಟಪುಷ್ಟವಾಗಿಲ್ಲದ ಕಾರಣ ಕಾಯಿ ಕಟ್ಟುವುದು ಕಡಿಮೆಯಾಗುತ್ತಿದೆ. ರೋಗದ ಪರಿಣಾಮ ಬೆಳವಣಿಗೆ ಕುಂಠಿತವಾಗಿದೆ. ನಿರೀಕ್ಷಿತ ಪ್ರಮಾಣದ ಆದಾಯ ಬರುವುದಿರಲಿ, ಹಾಕಿರುವ ಬಂಡವಾಳ ಬಂದರೆ ಸಾಕು ಎಂಬುದು ರೈತರ ಅಳಲು.

ಹೊಸದುರ್ಗ ತಾಲ್ಲೂಕಿನ ಕಡದಿನಕೆರೆ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಸಸಿ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು
ಹೊಸದುರ್ಗ ತಾಲ್ಲೂಕಿನ ಕಡದಿನಕೆರೆ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಸಸಿ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು

ಹೆಸರು ಬೆಳೆಗೆ ಬಿಳಿ ನೊಣಗಳ ಮೂಲಕ ಹಳದಿ ನಂಜಾಣು ರೋಗ ಬಹುಬೇಗ ಹರಡುತ್ತದೆ. ಪ್ರಾರಂಭದಲ್ಲಿ ಎಲೆಗಳ ಮೇಲೆ ಹಸಿರು ಮತ್ತು ಹಳದಿ ಮಿಶ್ರಿತ ಮಚ್ಚೆಗಳಾಗುತ್ತವೆ. ಕಾಲ ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಸಸ್ಯದ ಬೆಳವಣಿಗೆ ಕುಂಠಿತವಾಗಿ, ಇಳುವರಿಯಲ್ಲಿ  ಕಡಿಮೆಯಾಗುತ್ತದೆ. ಪ್ರಾರಂಭಿಕ ಹಂತದಲ್ಲೇ ಸೋಂಕು ತಗುಲಿದರೆ ಹೂ, ಕಾಯಿ ಸರಿಯಾಗಿ ಬರುವುದಿಲ್ಲ ಎಂದು ಮೂರು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದ ಕಡದಿನಕೆರೆಯ ರೈತ ಓಂಕಾರ್ ನಾಯ್ಕ.

ಹಳದಿ ರೋಗಕ್ಕೆ ತುತ್ತಾಗಿರುವ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ರೈತರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ. ವಾತಾವರಣ ತಂಪಾಗಿರುವ ಕಾರಣ ರೋಗ ಬಹುಬೇಗ ಹರಡುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮ ಆದರೆ ರೋಗ ನಿಯಂತ್ರಣಕ್ಕೆ ಬರಲಿದೆ. ಕೀಟನಾಶಕ ಸಿಂಪಡಣೆ ಮಾಡಿ ಅಪಾಯ ತಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಹೊಸದುರ್ಗದ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಹೆಸರು ಬೆಳೆ ಎಲೆ ಮುದುರಿರುವುದು
ಹೊಸದುರ್ಗದ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಹೆಸರು ಬೆಳೆ ಎಲೆ ಮುದುರಿರುವುದು
ರೋಗ ನಿಯಂತ್ರಣ ಅಸಾಧ್ಯವಾಗಿದೆ. ಇತ್ತೀಚೆಗೆ ಈ ರೋಗ ಹೆಚ್ಚಾಗಿದೆ. ಪ್ರತಿ ಬಾರಿಯೂ 5ರಿಂದ 7 ಕ್ವಿಂಟಲ್ ಹೆಸರು ಪಡೆಯುತ್ತಿದ್ದೆವು. ಈ ಬಾರಿ 3 ಕ್ವಿಂಟಲ್ ಆದರೂ ಸಿಕ್ಕರೆ ಸಾಕು ಎನ್ನುವಂತಾಗಿದೆ.
ಓಂಕಾರ್ ನಾಯ್ಕ ರೈತ ಕಡದಿನಕೆರೆ
ಮೇ ತಿಂಗಳ ಮೊದಲನೇ ವಾರದಲ್ಲಿ ಹೆಸರು ಬಿತ್ತನೆ ಆಗಬೇಕಿತ್ತು. ಮಳೆ ತಡವಾದ ಪರಿಣಾಮ ಹೆಸರು ಬಿತ್ತನೆ ಕಡಿಮೆಯಾಗಿದೆ. ರೈತರಿಗೆ ಸಾವೆ ಬಿತ್ತುವಂತೆ ಸಲಹೆ ನೀಡಿದ್ದೇವೆ. ರೋಗ ನಿಯಂತ್ರಣ ಮಾಹಿತಿಗೆ ಕೃಷಿ ಇಲಾಖೆ ಸಂಪರ್ಕಿಸಬಹುದು.
ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ 
ರೋಗ ನಿಯಂತ್ರಣಕ್ಕೆ ಸಲಹೆ
ಹೆಸರು ಬಿತ್ತಿದ 40 ದಿನಗಳ ನಂತರದಲ್ಲಿ ಸೋಂಕು ತಗುಲಿದ ಸಸಿಗಳನ್ನು ಕಿತ್ತು ಸುಟ್ಟು ಹಾಕಬೇಕು. ಬೆಳೆ ಪರಿವರ್ತನೆ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ ಇಮಿಡಾ ಕ್ಲೋಪ್ರಿಡ್ ಶೇ 48ರಷ್ಟು ಎಫ್.ಎಸ್. ಪೀಡೆನಾಶಕವನ್ನು ಬೀಜೋಪಚಾರ ಮಾಡಬೇಕು. ಒಂದು ಲೀಟರ್ ನೀರಿಗೆ ಇಮಿಡಾ ಕ್ಲೋಪ್ರಿಡ್ 17.8 ಎಸ್.ಎಲ್. ಪೀಡೆನಾಶಕವನ್ನು 0.5 ಎಂ.ಎಲ್‌ನಂತೆ ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಗೆ ಬರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT