ಶನಿವಾರ, ಡಿಸೆಂಬರ್ 4, 2021
26 °C
ಇಸಾಮುದ್ರ ಗ್ರಾಮದಲ್ಲಿ ವಿಷಾಹಾರ ಸೇವಿಸಿದ ಪ್ರಕರಣ ಭೇದಿಸಿದ ಪೊಲೀಸರು

ಪ್ರೀತಿಯಲ್ಲಿ ತಾರತಮ್ಯ: ಅಣ್ಣ, ತಂಗಿ, ಅಪ್ಪ, ಅಮ್ಮ, ಅಜ್ಜಿಗೇ ವಿಷವಿಟ್ಟ ಮನೆ ಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಚಿತ್ರದುರ್ಗ: ತಾಲ್ಲೂಕಿನ ಇಸಾಮುದ್ರ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ಮಕ್ಕಳಿಗೆ ತೋರುವ ಪ್ರೀತಿ–ವಾತ್ಸಲ್ಯದಲ್ಲಿ ಆಗಿರುವ ತಾರತಮ್ಯಕ್ಕೆ ಪುತ್ರಿಯೇ ವಿಷವಿಟ್ಟು ಪೋಷಕರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನೆ ನಡೆದು ಮೂರು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ. 17 ವರ್ಷದ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ಬಾಲಕಿಯರ ಬಾಲಮಂದಿರಕ್ಕೆ ಹಸ್ತಾಂತರಿಸಿದ್ದಾರೆ. ಮುದ್ದೆಯಲ್ಲಿ ಬೆರೆತಿದ್ದ ಕೀಟನಾಶಕ ಸಾವಿಗೆ ಕಾರಣವಾಗಿದೆ ಎಂಬುದು ದೃಢಪಟ್ಟಿದೆ.

ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದ ನಾಲ್ವರು ಮೃತಪಟ್ಟ ಘಟನೆ ಜುಲೈ 12ರಂದು ನಡೆದಿತ್ತು. ಬಾಲಕಿಯ ತಂದೆ ತಿಪ್ಪಾನಾಯ್ಕ (45), ತಾಯಿ ಸುಧಾಬಾಯಿ (40), ಅಜ್ಜಿ ಗುಂಡಿಬಾಯಿ (80) ಹಾಗೂ ಸಹೋದರಿ ರಮ್ಯಾ (16) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಹುಲ್‌ (19) ಚಿಕಿತ್ಸೆಯ ಬಳಿಕ ಚೇರಿಸಿಕೊಂಡಿದ್ದ. ಕೊಲೆ ಆರೋಪ ಎದುರಿಸುತ್ತಿರುವ ಬಾಲಕಿ ಮುದ್ದೆ ಸೇವಿಸಿರಲಿಲ್ಲ.

ಕುಟುಂಬದ ಸದಸ್ಯರು ಸೇವಿಸಿದ್ದ ಮುದ್ದೆ, ಅನ್ನ–ಸಾರು, ಇದಕ್ಕೆ ಬಳಕೆ ಮಾಡಿದ ಪದಾರ್ಥ ಹಾಗೂ ಪಾತ್ರೆಗಳನ್ನು ದಾವಣಗೆರೆಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿರುವ ಸಂಗತಿ ಪ್ರಯೋಗಾಲಯದ ವರದಿಯಿಂದ ಗೊತ್ತಾಯಿತು. ವಿಷ ಬೆರೆಸಿ ಕೊಲೆ ಮಾಡಿದ ಆಯಾಮದಿಂದ ತನಿಖೆ ನಡೆಸಿದಾಗ ರಹಸ್ಯ ಬೆಳಕಿಗೆ ಬಂದಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜುಲೈ 12ರಂದು ರಾತ್ರಿ ಬಾಲಕಿ ಮುದ್ದೆ ತಯಾರಿಸಿದ್ದಳು. ಇವಳ ಸಹೋದರಿ ಅನ್ನ–ಸಾರು ತಯಾರಿಸಿದ್ದಳು. ಮನೆಯ ಮುಂಭಾಗದ ಜಗುಲಿ ಸಮೀಪದ ಒಲೆಯಲ್ಲಿ ಊಟವನ್ನು ಸಿದ್ಧಪಡಿಸಲಾಗಿತ್ತು. ಮುದ್ದೆಗೆ ಕೀಟನಾಶಕವನ್ನು ಬೆರಸಿದ ಬಾಲಕಿ ಕುಟುಂಬದ ಎಲ್ಲರಿಗೂ ಬಡಿಸಿದ್ದಳು. ತಾನು ಮಾತ್ರ ಅನ್ನ–ಸಾರು ಊಟ ಮಾಡಿದ್ದಳು. ಆಹಾರ ಸೇವಿಸಿದ ಐವರಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವ ಮೊದಲೇ ನಾಲ್ವರು ಮೃತಪಟ್ಟಿದ್ದರು.

ದಂಪತಿಯ ಮೂವರು ಮಕ್ಕಳಲ್ಲಿ ಬಾಲಕಿ ಎರಡನೇಯವಳು. 13 ವರ್ಷದವರೆಗೂ ಹೊಳಲ್ಕೆರೆ ತಾಲ್ಲೂಕಿನ ಐನಳ್ಳಿಯ ಅಜ್ಜಿಯ ಮನೆಯಲ್ಲಿ ಬೆಳೆದಿದ್ದಳು. 8ನೇ ತರಗತಿ ವ್ಯಾಸಂಗಕ್ಕೆ ಇಸಾಮುದ್ರಕ್ಕೆ ಬಂದವಳು ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕೆಲಸ


ಜಿ.ರಾಧಿಕಾ

ಮಾಡುತ್ತಿದ್ದಳು. ಪೋಷಕರು ರಮ್ಯಾ ಹಾಗೂ ರಾಹುಲ್‌ಗೆ ತೋರುವ ಪ್ರೀತಿಯನ್ನು ತನಗೆ ತೋರುತ್ತಿಲ್ಲ ಎಂಬ ಕೊರಗಿತ್ತು. ಪೋಷಕರ ನಿಂದನೆಯನ್ನು ತಾಳದೇ ವಿಷ ಹಾಕಿ ಕೊಲೆ ಮಾಡುವ ಸಂಚು ಮಾಡಿದ್ದಳು. ಮೀನು ಸಾರಿಗೆ ವಿಷ ಹಾಕಿ ಒಮ್ಮೆ ಯತ್ನಿಸಿ ವಿಫಲಳಾಗಿದ್ದಳು.

ಕೊಲೆಯ ಅನುಮಾನ ವ್ಯಕ್ತವಾಗುತ್ತಿದ್ದಂತೆ ಗ್ರಾಮದ ಹಲವರ ಮೇಲೆ ಸಂಶಯವಿತ್ತು. ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿತು.

- ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು