ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಬೆಂಕಿ ಇಡುವ ಪಕ್ಷ ಕಾಂಗ್ರೆಸ್‌: ನಳಿನ್‌ ಕುಮಾರ್‌ ಕಟೀಲ್‌

Last Updated 9 ಫೆಬ್ರುವರಿ 2020, 12:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೌದ್ಧಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್‌ ಪಕ್ಷ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ ನಡೆಸಿದರು

ಇಲ್ಲಿನ ಉಮಾಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎ.ಮುರುಳಿ ಯಾದವ್‌ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ಆರು ವರ್ಷದಲ್ಲಿ ಬಿಜೆಪಿ ಟೀಕಿಸಲು ಕಾಂಗ್ರೆಸ್‌ ಸೇರಿ ವಿರೋಧ ಪಕ್ಷಗಳಿಗೆ ಯಾವುದೇ ವಿಷಯ ಸಿಕ್ಕಿರಲಿಲ್ಲ. ಕಾಶ್ಮೀರ ಹಾಗೂ ರಾಮಮಂದಿರ ವಿಚಾರದಲ್ಲಿ ದೇಶದಲ್ಲಿ ದಂಗೆ ಏಳಬಹುದು ಎಂದು ಕಾಂಗ್ರೆಸ್‌ ನಿರೀಕ್ಷಿಸಿತ್ತು. ಪೌರತ್ವದ ವಿಚಾರವನ್ನು ತಿರುಚಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಪ್ರತಿಭಟನೆ ಮಾಡುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಾಯ್ದೆಯ ಬಗ್ಗೆ ಪರಿಪೂರ್ಣ ತಿಳಿವಳಿಕೆ ಇಲ್ಲ’ ಎಂದು ಟೀಕಿಸಿದರು.

ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಶೇ 27ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ 3ಕ್ಕೆ ಕುಸಿದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಕಾಂಗ್ರೆಸ್ ಬಳಿ ಉತ್ತರ ಇಲ್ಲ. ‘ಅಪಪ್ರಚಾರ ನಡೆಸಿ ದೇಶಕ್ಕೆ ಬೆಂಕಿ ಇಡುವವರು ದೇಶದ್ರೋಹಿಗಳು’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್‌ ಏನು ಎಂದು ಪ್ರೇಕ್ಷಕರನ್ನು ಪ್ರಶ್ನಿಸಿದರು. ಇಡೀ ಸಭಾಂಗಣ ‘ದೇಶದ್ರೋಹಿಗಳು’ ಎಂದು ಉತ್ತರಿಸಿತು.

ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿ ಸಿಲುಕಿದೆ. ಅದೊಂದು ಅಕ್ಷರಶಃ ಒಡೆದ ಮನೆಯಾಗಿದೆ. ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ನೀಡಿ ಆರು ತಿಂಗಳು ಕಳೆದಿವೆ. ಆದರೆ, ಈವರೆಗೂ ಅಧ್ಯಕ್ಷರನ್ನು ಹುಡುಕಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಪಕ್ಷವನ್ನೇ ನಡೆಸಲು ಸಾಧ್ಯವಿಲ್ಲದವರು ದೇಶವನ್ನು ಹೇಗೆ ಮುನ್ನಡೆಸಲು ಸಾಧ್ಯ? ಕೆಪಿಸಿಸಿಗೆ ಯಾರನ್ನೇ ನೇಮಕ ಮಾಡಿದರೂ ಸಿದ್ದರಾಮಯ್ಯ ಪಕ್ಷ ತೊರೆಯುವುದು ನಿಶ್ಚಿತ ಎಂದು ಹೇಳಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮುಂಬವರು ಚುನಾವಣೆಯಲ್ಲಿ ಖಂಡಿತ ಆರು ಸ್ಥಾನವನ್ನು ಗೆಲ್ಲುತ್ತೇವೆ. ಒನಕೆ ಓಬವ್ವ, ಮದಕರಿ ನಾಯಕ ಆಳ್ವಿಕೆ ನಡೆಸಿದ ನಾಡಿನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ. ಅಧಿಕಾರ ಸಿಕ್ಕಾಗ ಕಣ್ಣೀರು ಹಾಕುವ ಮುಖ್ಯಮಂತ್ರಿಯನ್ನು ಜನರು ತಿರಸ್ಕರಿಸಿದ್ದಾರೆ. ಮುಂದಿನ ಹತ್ತು ವರ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ’ ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಬಿಜೆಪಿ ಸರ್ಕಾರ ಅಯೋಧ್ಯೆ ಸೇರಿ ಹಲವು ಸಮಸ್ಯೆಗಳನ್ನು ಪರಿಹರಿಸಿದೆ. ಹೀಗಾಗಿ, ವಿರೋಧ ಪಕ್ಷಗಳಿಗೆ ಕೆಲಸ ಇಲ್ಲದಂತಾಗಿದೆ. ಸಂಸತ್ತಿನಲ್ಲಿ ಅನುಮೋದನೆ ಪಡೆದು ಕಾಯ್ದೆ ಸ್ವರೂಪ ತಾಳಿದ ಪೌರತ್ವವನ್ನು ವಿರೋಧಿಸುತ್ತಿವೆ. ಇದು ನಿಜಕ್ಕೂ ದೇಶದ್ರೋಹದ ಕಾರ್ಯ’ ಎಂದು ಗುಡುಗಿದರು.

ಬಿಜೆಪಿ ಮುಖಂಡರಾದ ಜಿ.ಎಂ.ಸುರೇಶ್‌, ಸಿದ್ದೇಶ್‌ ಯಾದವ್, ಟಿ.ಜೆ.ನರೇಂದ್ರನಾಥ್‌, ಪಿ.ರಾಮಯ್ಯ, ಅನಿತ್‌ ಕುಮಾರ್‌, ಮಲ್ಲಿಕಾರ್ಜುನ, ಡಿ.ಟಿ.ಶ್ರೀನಿವಾಸ್‌, ಲಿಂಗಮೂರ್ತಿ, ಜಯಪಾಲಯ್ಯ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT