ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಜಲಪಾತ್ರೆಗಳಿಗೆ ಬೇಕಿದೆ ಕಾಯಕಲ್ಪ

ಹೊಂಡ, ಪುಷ್ಕರಣಿಗಳಲ್ಲಿ ಕಾಣದಂತಾದ ಸ್ವಚ್ಛತೆ; ಮಲಿನವಾಗುತ್ತಿದೆ ನೀರು
Published 24 ಜೂನ್ 2024, 5:59 IST
Last Updated 24 ಜೂನ್ 2024, 5:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ಲಾಸ್ಟಿಕ್‌ ಕವರ್‌ಗಳು, ಬಾಡಿದ ಹೂವು, ನೀರಿನ ಬಾಟಲ್‌, ಪೂಜಿಸಿದ ತೆಂಗಿನ ಕಾಯಿ, ಮದ್ಯದ ಪೌಚ್‌ಗಳು.. ಹೀಗೆ ರಾಶಿ ರಾಶಿ ತ್ಯಾಜ್ಯ ತಡೆಯಿಲ್ಲದೆ ಜಲಮೂಲದ ಒಡಲು ಸೇರುತ್ತಿದೆ. ಕಸದಿಂದಾಗಿ ನೀರು ಮಲಿನಗೊಂಡು ಸುತ್ತಲಿನ ವಾತಾವರಣ ಕಲುಷಿತಗೊಂಡು ವರ್ಷಗಳೇ ಉರುಳಿವೆ.

ಬರದ ನಾಡಿನಲ್ಲಿ ನೀರಿನ ಸಮಸ್ಯೆ ನೀಗಿಸಲು ಪಾಳೆಗಾರರು ರೂಪಿಸಿದ ಜಲಮೂಲಗಳು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಇದರಿಂದಾಗಿ ಸದ್ದಿಲ್ಲದೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಎರಡ್ಮೂರು ವರ್ಷಕ್ಕೊಮ್ಮೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆ ದಾಖಲಾಗುತ್ತಿದೆ. ಆದರೆ ಬಿದ್ದ ಮಳೆ ನೀರನ್ನು ಸರಿಯಾದ ರೀತಿ ಸಂಗ್ರಹಿಸಿ ಉಪಯೋಗಿಸುವಲ್ಲಿ ಮಾತ್ರ ಜಿಲ್ಲಾಡಳಿತ, ನಗರಸಭೆ ನಿರಂತರವಾಗಿ ಎಡವುತ್ತಿವೆ.

ಕಳೆದ ತಿಂಗಳಿನಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನಗರದ ಎಲ್‌ಐಸಿ ಪಕ್ಕದ ಕೆಂಚಮಲ್ಲಪ್ಪನ ಹೊಂಡ, ಸಿಹಿನೀರು ಹೊಂಡ, ಮುನ್ಸಿಪಲ್‌ ಕಾಲೊನಿಯ ಗಣಪತಿ ದೇಗುಲದ ಹಿಂಭಾಗದ ಪುಷ್ಕರಣಿ, ಸಂತೆಹೊಂಡಗಳಿಗೆ ನೀರು ಹರಿದಿದೆ. ಆದರೆ ಪ್ಲಾಸ್ಟಿಕ್‌ ಬಾಟಲಿ, ಕವರ್‌, ಟ್ಯೂಬ್‌, ಪ್ಲಾಸ್ಟಿಕ್‌ ಚೊಂಬು, ಲೋಟ, ಕಸಪೊರಕೆ, ತೆಂಗಿನಕಾಯಿ, ಪೂಜಾ ಸಾಮಗ್ರಿ.. ಹೀಗೆ ಹಲವು ಬಗೆಯ ಕಸ ಹೊಂಡಗಳ ಒಡಲು ಸೇರಿದ್ದು, ನೀರು ಕಾಣದಂತಾಗಿದೆ.

ನಗರದ ಚನ್ನಕೇಶವ ಹೊಂಡ, ಕವಾಡಿಗರಹಟ್ಟಿ ಕಲ್ಯಾಣಿ ಹೊರತುಪಡಿಸಿದರೆ ಬಹುತೇಕ ಹೊಂಡಗಳು ಕಸದ ತಾಣಗಳಾಗಿವೆ. ನಗರದ ಮುಖ್ಯ ರಸ್ತೆಯಲ್ಲಿರುವ ಕೆಂಚಮಲ್ಲಪ್ಪನ ಹೊಂಡದ ಸ್ಥಿತಿ ಹೇಳುವುದಕ್ಕೂ ಅಸಾಧ್ಯವಾಗಿದೆ.

ವಾಣಿವಿಲಾಸ ಸಾಗರ, ಶಾಂತಿಸಾಗರದ ನೀರು ನಗರಕ್ಕೆ ಪೂರೈಸುವ ಮೊದಲು ಹೊಂಡಗಳೇ ಕೋಟೆನಗರಿಗೆ ನೀರು ಪೂರೈಕೆಗೆ ಆಸರೆಯಾಗಿದ್ದವು.  ಸಿಹಿನೀರಿನ ಹೊಂಡ ಕುಡಿಯುವ ನೀರಿನ ಮುಖ್ಯ ಮೂಲವಾಗಿತ್ತು. ಸಂತೆಗೆ ಬರುವವರಿಗೆ ಸಂತೆಹೊಂಡ ನೀರಿನ ಮೂಲವಾಗಿತ್ತು. ಕೆಳಗೋಟೆಯ ಚನ್ನಕೇಶವ ಹೊಂಡವೂ ಜನರಿಗೆ ನೀರು ಒದಗಿಸುತ್ತಿತ್ತು.

ಸಂಪೂರ್ಣ ಹೂಳು ತುಂಬಿದ್ದ ಸಿಹಿನೀರು ಹೊಂಡಕ್ಕೆ 2016ರ ಅಕ್ಟೋಬರ್‌ನಲ್ಲಿ ನಗರಸಭೆಯಿಂದ ಕಾಯಕಲ್ಪ ನೀಡಲಾಯಿತು. ಬಳಿಕ ನಗರದಲ್ಲಿ ಎರಡ್ಮೂರು ತಿಂಗಳು ಸತತವಾಗಿ ‘ಕ್ಲೀನ್‌ ಹೊಂಡ ಅಭಿಯಾನ’ ನಡೆಯಿತು. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿದ್ದವು. ಈ ಅಭಿಯಾನದಿಂದಾಗಿ ನಗರದ ಜಲಮೂಲಗಳು ಶುಚಿಯಾಗಿದ್ದವು.

ಪುಷ್ಕರಣಿ, ಹೊಂಡಗಳಲ್ಲಿ ಬಿದ್ದಿದ್ದ ಕಸ, ಹೂಳು ತೆಗೆಸಿದ್ದರಿಂದ ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಾಗಿತ್ತು. ಮಳೆಯಿಂದ ತುಂಬಿದ್ದ ಹೊಂಡಗಳನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದರು. 

ಸ್ವಚ್ಚತೆ ಅಭಿಯಾನ ನಡೆಸಿದ ಬಳಿಕ ನಗರಸಭೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿತು. ಆದರೂ ಸಹ ಪುನಃ ಕಸವನ್ನು ಹೊಂಡಗಳಿಗೆ ಸುರಿಯುತ್ತಿದ್ದ ಕಾರಣ 2019ರಲ್ಲಿ ಜಿಲ್ಲಾಡತದಿಂದ ಸ್ವಚ್ಛತೆ ನಡೆಸಲಾಗಿತ್ತು.

ಹೊಳಲ್ಕೆರೆ ರಸ್ತೆಯ ಸಿಹಿನೀರು ಹೊಂಡ ಹಾಗೂ ಕೆಂಚಮಲ್ಲಪ್ಪನ ಹೊಂಡಕ್ಕೆ ನಗರಸಭೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಆದರೂ ಸಹ ಕಸ ಸುರಿಯುವುದನ್ನು ತಡೆಯಲು ಈವರೆಗೂ ಸಾಧ್ಯವಾಗಿಲ್ಲ. ಜಲಮೂಲ ಸಂರಕ್ಷಣೆ ಕೂಗು ಕೇಳಿಬಂದಾಗ ನಗರಸಭೆ ಚಿಕ್ಕಪುಟ್ಟ ಕೆಲಸ ನಿರ್ವಹಿಸಿ ಪುನಃ ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗಿದೆ. ಜನರು ಸಹ ಹೊಂಡ, ಪುಷ್ಕರಣಿಗಳ ರಕ್ಷಣೆಗೆ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕಿದೆ.

ಹೊಸದುರ್ಗದ ದಶರಥರಾಮೇಶ್ವರದಲ್ಲಿನ ಹೊಂಡ
ಹೊಸದುರ್ಗದ ದಶರಥರಾಮೇಶ್ವರದಲ್ಲಿನ ಹೊಂಡ
ಹಾಳಾಗಿರುವ ಚಿಕ್ಕಜಾಜೂರು ಸಮೀಪದ ಆಡನೂರು ಗ್ರಾಮದ ಹೊಂಡ
ಹಾಳಾಗಿರುವ ಚಿಕ್ಕಜಾಜೂರು ಸಮೀಪದ ಆಡನೂರು ಗ್ರಾಮದ ಹೊಂಡ

ನಿರ್ವಹಣೆ ಕೊರತೆಯಿಂದ ನಗರದ ಹೊಂಡಗಳು ಕಲುಷಿತಗೊಂಡಿರುವುದನ್ನು ಗಮನಿಸಿದ್ದೇನೆ. ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಸ್ವಚ್ಛತೆಗೆ ಸೂಚನೆ ನೀಡಲಾಗಿದೆ. ಕೆರೆಗಳಿಗೆ ತ್ಯಾಜ್ಯ ಸೇರುತ್ತಿರುವುದು

-ಮತ್ತಿ ತಿಮ್ಮಣ್ಣನಾಯಕ ಕೆರೆ ಸಮಸ್ಯೆ ಬಗೆಹರಿಸಲಾಗುತ್ತದೆ ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಐತಿಹಾಸಿಕ ಹಿನ್ನೆಲೆಯ ಜಲಮೂಲಗಳಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ. ಈ ಹಿಂದೆ ಹೊಂಡ ಪುಷ್ಕರಣಿಗಳನ್ನು ಸ್ವಚ್ಛಗೊಳಿಸಿದ್ದಾಗ ಜನರ ಆಕರ್ಷಣೆಯ ಸ್ಥಳಗಳಾಗಿದ್ದವು. ಇದೀಗ ಪುನಃ ಕಲುಷಿತಗೊಂಡಿದ್ದು ಸೂಕ್ತ ನಿರ್ವಹಣೆ ಮೂಲಕ ಸಂರಕ್ಷಣೆ ಮಾಡಬೇಕಿದೆ

-ಟಿ.ಹನುಮಂತಪ್ಪ ವಕೀಲರು ಚಿತ್ರದುರ್ಗ

ಪಾಳೆಗಾರರ ಕಾಲದಲ್ಲಿ ನಿರ್ಮಾಣವಾಗಿರುವ ಹೊಂಡಗಳು ಕಸದ ತೊಟ್ಟಿಗಳಾಗಿವೆ ಎಂಬುದು ಬೇಸರದ ಸಂಗತಿ. ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ. ಜಿಲ್ಲಾಡಳಿತ ನಗರಸಭೆ ಈ ಬಗ್ಗೆ ಕಾಳಜಿ ವಹಿಸಿ ಸ್ಪಚ್ಛತಾ ಕಾರ್ಯ ನಡೆಸಬೇಕು

-ಎಚ್‌.ಅಂಜಿನಪ್ಪ ಅಧ್ಯಕ್ಷ ಮಾನವ ಬಂಧುತ್ವ ವೇದಿಕೆ

ಕೆರೆಗಳ ಸ್ಥಿತಿ ಅಯೋಮಯ

ಪಾಳೆಗಾರರ ಕಾಲದಿಂದಲೂ ಕುಡಿಯುವ ನೀರಿನ ಮೂಲವಾಗಿದ್ದ ಕೋಟೆಯ ಮತ್ತಿ ತಿಮ್ಮಣ್ಣನಾಯಕ ಕೆರೆ ಗತವೈಭವಕ್ಕೆ ಮರಳುವ ಲಕ್ಷಣಗಳು ಗೋಚರಿಸುತ್ತಿರುವ ಸಮಯದಲ್ಲಿ ಮದ್ಯಪ್ರಿಯರು ಕಂಟಕವಾಗಿದ್ದಾರೆ. ನೀರು ಸಂಗ್ರಹವಾಗದೇ ಪಾಳು ಬಿದ್ದಿದ್ದ 62 ಎಕರೆ ವಿಸ್ತೀರ್ಣದ ಕೆರೆಯಲ್ಲಿ 2018ರ ಡಿಸೆಂಬರ್‌ನಲ್ಲಿ ಮಾನವ ಬಂಧುತ್ವ ವೇದಿಕೆಯ ಯುವಕರ ತಂಡ ಪುನರುಜ್ಜೀವನ ಕಾರ್ಯ ನಡೆಸಿತ್ತು. 30 ಎಕರೆ ಕೆರೆ ಅಂಗಳದಲ್ಲಿ ಬೆಳೆದಿದ್ದ ಜಾಲಿ ಗಿಡಗಳನ್ನು ಸದಸ್ಯರು ತೆರವುಗೊಳಿಸಿದ್ದರು. ಬಳಿಕ ಕೆರೆಗೆ ಹರಿದುಬರುತ್ತಿದ್ದ ನೀರಿನ ಮೂಲ ಹುಡುಕಿ ಬೆಟ್ಟದ ಮೇಲಿನಿಂದ ನೀರು ಹರಿದುಬರುವ ಹಳ್ಳಗಳನ್ನು ಶುಚಿಗೊಳಿಸಿದ್ದರು. ಈ ಶ್ರಮದಿಂದಾಗಿ ಕೆರೆ ಅಂಗಳಕ್ಕೆ ನೀರು ಆವರಿಸಿ ಮೊಸಳೆ ಸೇರಿದಂತೆ ಜಲಚರಗಳು ಕಾಣಿಸುವಂತಾಗಿದೆ. ‘ಜೋಗಿಮಟ್ಟಿ ಅರಣ್ಯದ ತಪ್ಪಲಿನ ವನ್ಯಜೀವಿಗಳಿಗೆ ಆಸರೆಯಾಗಿರುವ ಕೆರೆಗೆ ಮದ್ಯಪ್ರಿಯರು ಮದ್ಯದ ಬಾಟಲ್‌ಗಳು ಪೌಚ್‌ಗಳು ಊಟ ಮಾಡಿದ ಅಡಿಕೆ ತಟ್ಟೆ ಪ್ಲಾಸ್ಟಿಕ್‌ ಕವರ್‌ಗಳು ಮಾಂಸದ ತ್ಯಾಜ್ಯ ಎಸೆಯುತ್ತಿದ್ದಾರೆ. ಇದರಿಂದ ಕೆರೆಯ ಪರಿಸರದ ಜತೆಗೆ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ’ ಎನ್ನುತ್ತಾರೆ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಎಚ್‌.ಅಂಜಿನಪ್ಪ. ಪ್ರತಿ ಮಳೆಗೆ ಕೋಡಿ ಬೀಳುವ ನಗರದ ಹೊರವಲಯದ ಮಲ್ಲಾಪುರ ಕೆರೆಯ ಸ್ಥಿತಿ ಭಿನ್ನವಾಗಿಲ್ಲ. ನಗರದ ತ್ಯಾಜ್ಯ ಕೆರೆಯನ್ನು ಆವರಿಸಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿರುವುದು ಮಾತ್ರ ತಪ್ಪಿಲ್ಲ. ಇನ್ನೂ ಗೋನೂರು ಕೆರೆಯ ಸ್ಥಿತಿ ಭಿನ್ನವಾಗಿಲ್ಲ.

ಪುಣ್ಯಕ್ಷೇತ್ರಗಳಲ್ಲಿ ಸ್ವಚ್ಛತೆ ದೂರ

-ಶ್ವೇತಾ.ಜಿ

ಹೊಸದುರ್ಗ: ತಾಲ್ಲೂಕಿನಾದ್ಯಂತ ಇರುವ ಹೊಂಡ ಬಾವಿ ಅಥವಾ ಕಲ್ಯಾಣಿಗಳು ಸ್ವಚ್ಛತೆ ಹಾಗೂ ಕಾಯಕಲ್ಪಕ್ಕೆ ಎದುರು ನೋಡುತ್ತಿವೆ. ಪುಣ್ಯಕ್ಷೇತ್ರಗಳಾದ ಹಾಲುರಾಮೇಶ್ವರ ಹಾಗೂ ದಶರಥರಾಮೇಶ್ವರಗಳಲ್ಲಿನ ಹೊಂಡಗಳಲ್ಲಿ ನಿತ್ಯ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾವಿರಾರು ಜನರು ಬರುವ ಈ ಜಾಗಗಳಲ್ಲಿ ಸ್ವಚ್ಛತೆ ದೂರವಾಗಿದೆ. ಬನಸೀಹಳ್ಳಿಯಲ್ಲಿನ ಹೊಂಡ ಹಲವು ವರ್ಷಗಳಿಂದ ಕಾಯಕಲ್ಪ ಕಾಣದೆ ಹಾಗೆ ಇತ್ತು. ಪ್ರಸ್ತುತ ಅಲ್ಲಿನ ನೀರು ಖಾಲಿ ಮಾಡಲಾಗಿದೆ. ‘ಸಂತಾನ ಪ್ರಾಪ್ತಿ ವಿವಿಧ ದೋಷ ಪರಿಹಾರ ಸೇರಿದಂತೆ ಹತ್ತು ಹಲವು ಕಾರ್ಯಗಳಿಗೆ ನಿತ್ಯ ಭಕ್ತರು ಹಾಲುರಾಮೇಶ್ವರಕ್ಕೆ ಬರುತ್ತಾರೆ. ಇಲ್ಲಿನ ನೀರನ್ನು ಪವಿತ್ರ ಜಲವೆಂದು ಪೂಜಿಸುವುದುಂಟು. ಇಲ್ಲಿ ಬಂದು ಸ್ನಾನ ಮಾಡಿ ಗಂಗಮ್ಮ ಪೂಜೆ ಮಾಡಿ ಹೋಗುತ್ತಾರೆ. ಸ್ನಾನ ಮಾಡಿದ ಕೆಲ ಭಕ್ತರು ಹೊಂಡದ ಪಕ್ಕದಲ್ಲಿ ಬಟ್ಟೆ ಸೋಪು ಶಾಂಪೂ ಕವರ್‌ಗಳನ್ನು ಬಿಟ್ಟು ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಹೊಂಡದ ಪರಿಸರ ಹಾಳಾಗಿದೆ’ ಎನ್ನುತ್ತಾರೆ ಭಕ್ತರು. ಬಾಗೂರಿನ ಬಸವನಬಾವಿ ಶಿವನೇಕಟ್ಟೆ ಬೆನಕನಹಳ್ಳಿ ಸೇರಿದಂತೆ ಹಲವೆಡೆ ಬಾವಿಗಳಿವೆ. ಕಳೆದ ಬಾರಿ ಬರಗಾಲದಿಂದಾಗಿ ತಾಲ್ಲೂಕಿನ ಕೆಲ ಬಾವಿ ಹೊಂಡಗಳು ಬತ್ತಿವೆ. ಜಲಮೂಲಗಳ ರಕ್ಷಣೆ ಮಾಡಿದರೆ ನೀರಿನ ಸಮಸ್ಯೆ ನೀಗಲಿದೆ.

ಪುನಶ್ಚೇತನಕ್ಕೆ ಕಾದಿವೆ ಪುಷ್ಕರಣಿಗಳು

-ಜೆ. ತಿಮ್ಮಪ್ಪ

ಚಿಕ್ಕಜಾಜೂರು: ಕುಡಿಯುವ ನೀರಿನ ಸೌಲಭ್ಯಕ್ಕೆ ನಿರ್ಮಿಸಿದ್ದ ಕೆರೆ ಕಟ್ಟೆ ಕಾಲುವೆ ಪುಷ್ಕರಣಿಗಳು ಪುನಶ್ಚೇತನಕ್ಕೆ ಕಾದಿವೆ. ಸಮೀಪದ ಕಡೂರು ಗ್ರಾಮ ಒಂದರಲ್ಲೇ ಹತ್ತಾರು ಪುಷ್ಕರಣಿಗಳಿದ್ದು ನಿರ್ವಹಣೆ ಮಾತ್ರ ಇಲ್ಲದಂತಾಗಿದೆ. ಭರಮಣ್ಣ ನಾಯಕನ ದುರ್ಗದ ಬೆಟ್ಟದ ಮೇಲಿನ ಹೊಂಡ ಆಡನೂರು ಗ್ರಾಮದ ಹೊಂಡಗಳು ಜನರಿಗೆ ನೀರಿನ ಆಸರೆಯಾಗಿದ್ದವು. ಆದರೆ ನಿರ್ವಹಣೆ ಕೊರತೆ ಬತ್ತಿದ ಜಲಮೂಲ ಕೊಳವೆ ಬಾವಿಗಳ ಪರಿಣಾಮ ಅಸ್ತಿತ್ವ ಕಳೆದುಕೊಂಡಿವೆ. ಹೋಬಳಿಯ ಹಿರೇಎಮ್ಮಿಗನೂರು ಸಾಸಲು ಗ್ರಾಮಗಳಲ್ಲಿನ ಪುಷ್ಕರಣಿಗಳಿಗೆ ಸ್ಥಳೀಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪುನಶ್ಚೇತನ ನೀಡಿದೆ. ಜನರಿಂದ ನಿರ್ಲಕ್ಷ್ಯಕ್ಕೊಳಗಾದ ಪುರಾತನ ಹೊಂಡ ಪುಷ್ಕರಣಿಗಳಿಗೆ ಕಾಯಕಲ್ಪ ನೀಡಿದರೆ ಜನ ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ಒದಗಿಸಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT