ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ ಇಳಿಸುವ ಪ್ರಸ್ತಾಪಕ್ಕೆ ರೈತ ಮುಖಂಡರ ಆಕ್ಷೇಪ

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ
Last Updated 14 ಸೆಪ್ಟೆಂಬರ್ 2022, 4:33 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹಿರಿಯೂರು: ‘89 ವರ್ಷಗಳ ನಂತರ ವಾಣಿವಿಲಾಸ ಜಲಾಶಯ ಭರ್ತಿಯಾಗಿದ್ದು, ಕೋಡಿಯನ್ನು ಇಳಿಸುವಂತೆ ಒತ್ತಾಯಿಸುವುದು ಸರಿಯಲ್ಲ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಬಣ) ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.

ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಮೇಲ್ಭಾಗದಲ್ಲಿರುವ ಆರನಕಣಿವೆ ರಂಗನಾಥಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಕೋಡಿಯಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಜಲಾಶಯ ನಿರ್ಮಿಸುವಾಗ ಬೌಂಡರಿ ನಿಗದಿಪಡಿಸಿ, ಗುರುತಿಗೆ ಕಲ್ಲುಗಳನ್ನು ಹಾಕಿರುತ್ತಾರೆ. ಜಲಾಶಯದ ಅಂಗಳವನ್ನು ಒತ್ತುವರಿ ಮಾಡಿ, ಈಗ ಕೋಡಿಯನ್ನು ಇಳಿಸಿ ಎನ್ನುವುದು ಸರಿಯಲ್ಲ. ಒಮ್ಮೆಗೇ ಹೆಚ್ಚು ನೀರು ಬಂದಿರುವ ಕಾರಣ ತೊಂದರೆಯಾಗಿದೆ. ಇದನ್ನು ಜಲಾಶಯದ ಹಿನ್ನೀರು ಪ್ರದೇಶದ ಜನ ಅರ್ಥಮಾಡಿಕೊಳ್ಳಬೇಕು. ಹಿನ್ನೀರಿನಿಂದ ಸಂತ್ರಸ್ತರಾದವರಿಗೆ ಬೇರೆ ಕಡೆ ಭೂಮಿ, ಹಾಳಾಗಿರುವ ಬೆಳೆಗೆ ಪರಿಹಾರ, ವಸತಿ ಕಳೆದುಕೊಂಡವರಿಗೆ ಮನೆ ಕೊಡುವಂತೆ ಒತ್ತಾಯಿಸಿ ಹೋರಾಟ ನಡೆಸೋಣ. ಆದರೆ, ಕೋಡಿ ಇಳಿಸುವಂತೆ ಒತ್ತಾಯಿಸುವುದು ಬೇಡ. ಜಲಾಶಯದ ಹೆಚ್ಚುವರಿ ನೀರನ್ನು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಹರಿಸುವ ಕೆಲಸವಾಗಲಿ’ ಎಂದು ತಿಳಿಸಿದರು.

‘ಹೊಸದುರ್ಗ ತಾಲ್ಲೂಕಿನ ಹತ್ತಾರು ಹಳ್ಳಿಗಳು, ನೂರಾರು ಎಕರೆ ತೋಟ, ಕೃಷಿ ಭೂಮಿ ವಾಣಿವಿಲಾಸದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಕೋಡಿಯನ್ನು 125 ಅಡಿಗೆ ಇಳಿಸಿದಲ್ಲಿ ಹೆಚ್ಚಿನ ಭೂಮಿ ಮುಳುಗಡೆಯಾಗದು. ಇದಕ್ಕೆ ಹಿರಿಯೂರು ತಾಲ್ಲೂಕಿನ ರೈತರು ಸಹಕರಿಸಬೇಕು. ಪಹಣಿ ಹೊಂದಿರುವ ರೈತರಿಗೆ ಸರ್ಕಾರ ಬೇರೆ ಕಡೆ ಭೂಮಿ ಕೊಡಬೇಕು. ಬೆಳೆ ಪರಿಹಾರ ಹಾಗೂ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ರೈತ ಸಂಘದ ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಮಹೇಶ್ವರಪ್ಪ ಆಗ್ರಹಿಸಿದರು.

ಹಿರಿಯೂರು ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಆಲೂರು ಸಿದ್ದರಾಮಣ್ಣ, ಜಿಲ್ಲಾ ಅಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಕೆ.ಟಿ. ತಿಪ್ಪೇಸ್ವಾಮಿ, ಅಪ್ಪರಸನಹಳ್ಳಿ ಬಸವರಾಜಪ್ಪ, ಚಿಕ್ಕಜಾಜೂರು ಸದಾಶಿವಪ್ಪ, ಹೊಳಲ್ಕೆರೆಯ ಸತೀಶ್, ರಘು, ಮುರುಗೇಂದ್ರಪ್ಪ, ಕರಿಸಿದ್ದಯ್ಯ, ಕುಮಾರಯ್ಯ, ಭೈರೇಶ್, ರುದ್ರಮ್ಮ, ತುಳಜಮ್ಮ, ಶ್ರೀರಂಗಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT