ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಕೇರ್‌’ ವ್ಯವಹಾರ: 8 ಶಿಕ್ಷಕರ ಅಮಾನತು

Last Updated 14 ಫೆಬ್ರುವರಿ 2023, 6:29 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮೋದಿಕೇರ್‌’ ಚೈನ್‌ಲಿಂಕ್‌ ವ್ಯವಹಾರದಲ್ಲಿ ಭಾಗಿಯಾದ ಆರೋಪದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಂಟು ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಆದೇಶಿಸಿದ್ದಾರೆ.

ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರವಿಕುಮಾರ್‌, ರಾಮಗಿರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀನಿವಾಸ್‌, ಹಿರಿಯೂರು ತಾಲ್ಲೂಕು ಗುಯಿಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿದ್ದಮ್ಮ, ಪಾಲವ್ವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂದ್ರಾಣಿ, ಹಿಂಡಸಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಲಜಾ, ಪರಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜುಳಾ ಶ್ರೀನಿವಾಸ್‌, ರಂಗಪ್ಪ ಹಾಗೂ ಚಿತ್ರದುರ್ಗ ತಾಲ್ಲೂಕಿನ ದೊಡ್ಡಲಾಘಟ್ಟದ ಸರ್ಕಾರಿ ಪ್ರೌಢಶಾಲೆಯ ಶಿವಕುಮಾರ್‌ ಅಮಾನತುಗೊಂಡ ಶಿಕ್ಷಕರು.

‘ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 500 ಶಿಕ್ಷಕರು ಚೈನ್‌ಲಿಂಕ್‌ ವ್ಯವಹಾರದಲ್ಲಿ ತೊಡಗಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ವೃತ್ತಿಯನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್‌ ಸಭೆ ನಡೆಸುತ್ತಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಹೊಳಲ್ಕೆರೆಯ ಕೆ.ಮಲ್ಲಿಕಾರ್ಜುನ್‌ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ 16 ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ 8 ಶಿಕ್ಷಕರು ಅಗತ್ಯ ದಾಖಲೆ ಸಲ್ಲಿಸಿ ವಿವರಣೆ ನೀಡಿದ್ದರು. ಉಳಿದವರು ವಿಚಾರಣೆ ಹಂತದಲ್ಲಿ ಕೇಳಿದ ಮಾಹಿತಿ, ದಾಖಲೆ ಸಲ್ಲಿಸಲು ವಿಳಂಬ ನೀತಿ ಅನುಸರಿಸಿದ್ದರು. ಈ ಶಿಕ್ಷಕರು ಚೈನ್‌ಲಿಂಕ್‌ ವ್ಯವಹಾರದಲ್ಲಿ ಪಾಲ್ಗೊಂಡಿರುವುದು ವಿಚಾರಣಾ ತಂಡದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಸ್ತು ಪ್ರಾಧಿಕಾರಿಯೂ ಆಗಿರುವ ಉಪನಿರ್ದೇಶಕ ಕೆ. ರವಿಶಂಕರೆಡ್ಡಿ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT