ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದ ನಿಜಲಿಂಗಪ್ಪ

ಎಸ್. ನಿಜಲಿಂಗಪ್ಪ ಹೋರಾಟ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂದಿರಾ ಕೃಷ್ಣಪ್ಪ
Last Updated 5 ಸೆಪ್ಟೆಂಬರ್ 2021, 4:09 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ ಅವರು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಆದರ್ಶ ರಾಜಕಾರಣಿಯಾಗಿದ್ದಾರೆ’ ಎಂದು ಬೆಂಗಳೂರು ಗಾಂಧಿ ಸ್ಮಾರಕ ಭವನ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು.

ಎಸ್. ನಿಜಲಿಂಗಪ್ಪ ಸ್ಮಾರಕದಲ್ಲಿ ಜಿಲ್ಲಾಡಳಿತ, ಎಸ್.ಎನ್‌. ಮೆಮೋರಿಯಲ್ ಟ್ರಸ್ಟ್‌ನಿಂದ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಎಸ್. ನಿಜಲಿಂಗಪ್ಪ ಅವರ ಹೋರಾಟ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕಾರಣ ಹೇಗಿರಬೇಕು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ನಿಜಲಿಂಗಪ್ಪ ಕೂಡ ಪ್ರಮುಖರು. ಅದಕ್ಕಾಗಿಯೇ ವಿಶ್ವವಿದ್ಯಾಲಯಗಳಲ್ಲಿ ಇವರ ಕುರಿತಾದ ಪೀಠಗಳಿವೆ. ವಿದ್ಯಾರ್ಥಿಗಳಿಗೆ ಅಧ್ಯಯನ ವಿಷಯವಾಗಿದ್ದಾರೆ. ಅನೇಕ ಸಾಹಿತಿಗಳು ಗ್ರಂಥಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

‘ಜೈಲಿನ ಡೈರಿ ತೆಗೆದು ನೋಡಿದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಮಹಿಳೆಯರ ದೊಡ್ಡ ಪಟ್ಟಿಯೇ ಸಿಗುತ್ತದೆ. ಈ ಮಾಹಿತಿ ಸಂಗ್ರಹಿಸಿದ್ದು, ಸೂರ್ಯನಾಥ್ ಕಾಮತ್‌ ಅವರು. ಆದರೆ, ಅನೇಕ ಕೃತಿ ಹಾಗೂ ಪಠ್ಯಕ್ರಮಗಳಲ್ಲಿ ಪುರುಷ ಹೋರಾಟಗಾರರ ಹೆಸರುಗಳೇ ಹೆಚ್ಚಾಗಿ ಇವೆ. ಮಹಿಳೆಯರ ಕುರಿತು ಎಂದಿಗೂ ನಿರ್ಲಕ್ಷ್ಯ ಧೋರಣೆ ಸಲ್ಲದು’ಎಂದರು.

ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನ ಕೆಇಬಿ ಷಣ್ಮುಖಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯ, ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎನ್. ಸುಹಾಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮಹೇಂದ್ರನಾಥ್, ಕಾರ್ಯದರ್ಶಿ ಮಜರ್‌ಉಲ್ಲಾ, ಮುಖಂಡರಾದ ಆರತಿ ಮಹಡಿ ಶಿವಮೂರ್ತಿ, ಮಹಡಿ ಶಿವಮೂರ್ತಿ, ಗಂಗಾಧರ್ ಇದ್ದರು.

ಇದಕ್ಕೂ ಮುನ್ನ ಎಸ್. ನಿಜಲಿಂಗಪ್ಪ ಅವರ ಮನೆಯ ಮುಂಭಾಗದಿಂದ ಸ್ಮಾರಕದವರೆಗೂ ಫ್ರೀಡಂ ರನ್‌ ನಡೆಯಿತು. ಪ್ರತಿಜ್ಞಾವಿಧಿ ಸ್ವೀಕಾರದ ನಂತರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಚಾಲನೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌, ಕ್ರೀಡಾ ತರಬೇತುದಾರ ಮಹೀಬುಲ್ಲಾ, ರಾಯಲ್ ಸ್ಪೋರ್ಟ್ಸ್ ಅಕಾಡೆಮಿ ಲೋಕೇಶ್, ಸ್ಯಾಕ್ ಅಥ್ಲೆಟಿಕ್ಸ್ ಪ್ರೇಮ್, ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಬಾಬು, ಕುಸ್ತಿಪಟು ಸದ್ದಾಂ, ರೋಟರಿ ಕ್ಲಬ್ ಫೋರ್ಟ್ ಅಧ್ಯಕ್ಷ ಶಿವಕುಮಾರ್, ರೋಟರಿ ಕ್ಲಬ್ ಚಿನ್ಮುಲಾದ್ರಿ ಕಾರ್ಯದರ್ಶಿ ಅರುಣ್‍ಕುಮಾರ್, ಎನ್‌ಎಸ್‌ಎಸ್‌ ಅಧಿಕಾರಿ ಲೋಕೇಶ್‍ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT