ಶನಿವಾರ, ಜೂನ್ 25, 2022
24 °C
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ

ದೈವೀಪ್ರಜ್ಞೆ ಜಾಗೃತವಾದರೆ ರಾಮರಾಜ್ಯ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಬದುಕೇ ಭಗವಂತನ ಆರಾಧನೆಯಾಗಿ ಪ್ರತಿಯೊಬ್ಬರಲ್ಲೂ ದೈವಿಪ್ರಜ್ಞೆ ಜಾಗೃತಗೊಂಡಾಗ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೋನೂರು–ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗುರುಭಿಕ್ಷಾ ವಂದನ ಹಾಗೂ ಶತ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವ ಸಮುದಾಯ ವಿದೇಶಿ ಸಂಸ್ಕೃತಿಯತ್ತ ಹೆಜ್ಜೆ ಹಾಕಿದೆ. ಅವರಿಗೆ ಈ ನೆಲದ ಸಂಸ್ಕೃತಿಯ ರಕ್ಷಣೆಯನ್ನು ಕಲಿಸಿದರೆ ಸಾಕು ನಾವು ನಿರ್ಮಿಸುತ್ತಿರುವ ದೇವಸ್ಥಾನಗಳು ಸಾವಿರಾರು ವರ್ಷದವರೆಗೂ ಬೆಳೆಯುತ್ತವೆ. ಇಲ್ಲವಾದರೆ ಯಾವುದೂ ಉಳಿಯುವುದಿಲ್ಲ’ ಎಂದು ಎಚ್ಚರಿಸಿದರು.

‘ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಂಸ್ಕೃತಿ ಎಂಬುದು ಮನೆಯಿಂದಲೇ ಪ್ರಾರಂಭವಾಗ
ಬೇಕು. ಹುಟ್ಟಿದ ಮಕ್ಕಳಿಗೆ ನಾಮಕರಣ ಮಾಡುವಾಗ ಸಹ ಎಚ್ಚರಿಕೆ ವಹಿಸಬೇಕು. ಈ ವಿಚಾರದಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಗೋವುಗಳ ಆರಾಧನೆ ಹೆಚ್ಚಾಗಬೇಕು’ ಎಂದರು.

‘ನೂರಾರು ತೊಂದರೆಯಲ್ಲಿ ಸಿಲುಕುವ ಮನುಷ್ಯನಿಗೆ ದಿನದ 24 ತಾಸು ದೈವಾನುಗ್ರಹ ಬೇಕು. ದಿನ ಪೂರ್ಣ ದೇವರ ಪೂಜೆ ಮಾಡಿದರೆ ಹೊಟ್ಟೆ–ಬಟ್ಟೆಗೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ನಮ್ಮ ಕೆಲಸವೇ ದೇವರ ಆರಾಧನೆಯಾಗಬೇಕು. ಆಗ ಮೋಸ, ವಂಚನೆ, ಅವ್ಯಹಾರಕ್ಕೆ ಅಸ್ಪದವಿಲ್ಲದಂತಾಗುತ್ತದೆ’ ಎಂದರು.

‘ಸಮಸ್ಯೆಗಳಿಂದ ಮುಕ್ತಿ ದೊರಕಿಸು ಎಂದು ಪ್ರಾರ್ಥಿಸಲು ಎಲ್ಲರೂ ದೇಗುಲಕ್ಕೆ ಬರುತ್ತಾರೆ. ಆದರೆ, ದೇವಸ್ಥಾನದ ಗರ್ಭ ಗುಡಿಯಲ್ಲಷ್ಟೇ ಅಲ್ಲ ಎಲ್ಲರ ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ. ಕಾಯಕದಲ್ಲಿ ನಿಷ್ಠೆ, ಪ್ರಮಾಣಿಕತೆಯಿದ್ದರೆ ದೇವರ ಅನುಗ್ರಹ ಸದಾ ಇರುತ್ತದೆ’ ಎಂದು ತಿಳಿಸಿದರು.

ಶಿರಸಿ ಸ್ವರ್ಣವಲ್ಲಿ ಮಠದ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ಮಾತನಾಡಿ, ‘30 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಇಂತಹ ದೇಗುಲ ನಿರ್ಮಾಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಗುರು ಮತ್ತು ದೈವಾನುಗ್ರಹದಿಂದ ಎಲ್ಲ ಆತಂಕಗಳು ನಿವಾರಣೆಯಾಗಿ ಪುಣ್ಯಭೂಮಿ ಸ್ಥಾಪಿತವಾಗಿದೆ’ ಎಂದರು.

‘ದೇವರು ಮತ್ತು ಗುರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಇಬ್ಬರು ಜತೆಯಾಗಿದ್ದರೆ ದುಷ್ಟ ಶಕ್ತಿಗಳ ಸಂಹಾರವಾಗಿ ಸಕಲವೂ ಒಳಿತಾಗುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 7.30ರಿಂದ ಲಕ್ಷ್ಮೀ ನಾರಾಯಣ ಹೃದಯ ಹವನ, ಲಘು ರುದ್ರ ಹವನ, ಸೌರ ಹವನ, ಪೂರ್ಣಾಹುತಿ ಹಾಗೂ ಸಂಜೆ 5.30ರಿಂದ ಚಂಡಿ ಪಾರಾಯಣ, ನವಾಕ್ಷರಿ ಜಪ, ರಾಜೋಪಚಾರ ಪೂಜೆ, ಮಹಾ ಮಂಗಳಾರತಿ ನಡೆದವು.

ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಭಟ್‌, ಕಾರ್ಯದರ್ಶಿ ಅನಂತ ಭಟ್‌ ಇದ್ದರು.

ಗುರುಭಿಕ್ಷಾ ವಂದನದಲ್ಲಿ ಇಂದು

ಬೆಳಿಗ್ಗೆ 6.30ಕ್ಕೆ ಶತಚಂಡಿಕಾಹವನ, 10.30ಕ್ಕೆ ಮಹಾಪೂರ್ಣಾಹುತಿ, 11.30ಕ್ಕೆ ಧರ್ಮಸಭೆ, ಸಾನ್ನಿಧ್ಯ– ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಅಧ್ಯಕ್ಷತೆ– ಶಾಸಕ ಜಿ.ಎಚ್‌. ತಿಪ‍್ಪಾರೆಡ್ಡಿ, ಮುಖ್ಯಅತಿಥಿ– ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ಟಿ. ರಘುಮೂರ್ತಿ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್‌.ಮಂಜುನಾಥ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.