ವ್ಯಕ್ತಿ ಸಮೇತ ಸ್ಕಾರ್ಪಿಯೊ ಭಸ್ಮ

7
ಮೃತ ವ್ಯಕ್ತಿ ಪತ್ರಕರ್ತ ಎಂಬ ಶಂಕೆ

ವ್ಯಕ್ತಿ ಸಮೇತ ಸ್ಕಾರ್ಪಿಯೊ ಭಸ್ಮ

Published:
Updated:
Deccan Herald

ಹೊಳಲ್ಕೆರೆ: ತಾಲ್ಲೂಕಿನ ಅರೇಹಳ್ಳಿಯ ನೆಹರೂ ಕಾಲೊನಿಯ ಸಮೀಪದ ಜಮೀನಿನಲ್ಲಿ ಸ್ಕಾರ್ಪಿಯೊ ವಾಹನವೊಂದು ವ್ಯಕ್ತಿ ಸಮೇತ ಭಸ್ಮವಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ತಲೆಬುರುಡೆ ಹೊರತುಪಡಿಸಿ ದೇಹ ಸಂಪೂರ್ಣ ಭಸ್ಮವಾಗಿರುವ ಪರಿಣಾಮ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ವಾಹನವು ಚಿತ್ರದುರ್ಗದ ‘ಶೂರ’ ವಾರಪತ್ರಿಯ ಸಂಪಾದಕ ಮಂಜುನಾಥ್‌ ಎಂಬುವರಿಗೆ ಸೇರಿದ್ದು, ಭಾನುವಾರ ರಾತ್ರಿಯಿಂದ ಅವರೂ ನಾಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಅರೇಹಳ್ಳಿಯಿಂದ ಮಾರೇನಹಳ್ಳಿಗೆ ಸಾಗುವ ಮಾರ್ಗದಲ್ಲಿನ ಕಾಟಪ್ಪ ಎಂಬುವರ ಜಮೀನಿನಲ್ಲಿ ವಾಹನವೊಂದು ಭಸ್ಮವಾಗಿರುವುದನ್ನು ಸೋಮವಾರ ಬೆಳಿಗ್ಗೆ ನೆಹರೂ ಕಾಲೊನಿಯ ನಿವಾಸಿಗಳು ಗಮನಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸಿಪಿಐ ಮಧುಸೂದನ್‌ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಾಹನದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಗೊತ್ತಾಗಿದೆ. ತಲೆಬುರುಡೆ ಹಾಗೂ ಮೂಳೆಗಳು ಮಾತ್ರ ದೊರೆತಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಬುರುಜನಹಟ್ಟಿಯ ನಿವಾಸಿ ಮಂಜುನಾಥ್‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು. ಸಂಘದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ್ದರು. ಹೊಳಲ್ಕೆರೆಗೆ ಹೋಗುತ್ತಿರುವುದಾಗಿ ಪತ್ನಿಗೆ ಮಾಹಿತಿ ನೀಡಿ ಸಂಜೆ 5.30ಕ್ಕೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ರಾತ್ರಿ 7 ಗಂಟೆಯವರೆಗೂ ದೂರವಾಣಿ ಸಂಪರ್ಕದಲ್ಲಿದ್ದರು. ಬಳಿಕ ಅವರ ಮೊಬೈಲ್‌ ಫೋನ್‌ ಸ್ಥಗಿತಗೊಂಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಂಜುನಾಥ್‌ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತದೇಹ ಗುರುತು ಹಿಡಿಯಲಾರದಷ್ಟು ಸುಟ್ಟು ಹೋಗಿದೆ. ಕಾರು ಮಂಜುನಾಥ್ ಎಂಬುವರಿಗೆ ಸೇರಿರುವುದು, ಅವರು ಭಾನುವಾರ ಸಂಜೆಯಿಂದಲೇ ನಾಪತ್ತೆಯಾಗಿರುವುದು ಹಾಗೂ ಅವರ ಮೊಬೈಲ್ ಸ್ಥಗಿತಗೊಂಡಿರುವುದರ ಆಧಾರದ ಮೇರೆಗೆ ಮೃತ ವ್ಯಕ್ತಿ ಮಂಜುನಾಥ್‌ ಇರಬಹುದು ಎಂಬ ಸಂದೇಹ ಮೂಡಿದೆ. ಈ ಸಂಬಂಧ ಮಂಜುನಾಥ್‌ ಕುಟುಂಬಸ್ಥರು ಹೊಳಲ್ಕೆರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

‘ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮೃತದೇಹವನ್ನು ಮಧ್ಯರಾತ್ರಿಯ ನಂತರ ಜಮೀನಿಗೆ ತಂದು ಪೆಟ್ರೋಲ್‌ ಸುರಿದು ಸುಟ್ಟಿರಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !