ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯಕ್ಕೆ ‘ಸಿರಿಬೆಳಗು’ ಪ್ರಶಸ್ತಿ ಪ್ರದಾನ

ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿಕೆ
Last Updated 5 ಸೆಪ್ಟೆಂಬರ್ 2021, 14:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾನಪದ ವಿಶ್ವಕೋಶವೆಂದೇ ಖ್ಯಾತರಾದ ಸಿರಿಯಜ್ಜಿಯ ಸ್ಮರಣೆಯಲ್ಲಿ ‘ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ’ ನೀಡುವ ‘ಸಿರಿಬೆಳಗು’ ಪ್ರಶಸ್ತಿಯನ್ನು ತಿಂಗಳಾಂತ್ಯಕ್ಕೆ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಹಾಗೂ ಸಿರಿಯಜ್ಜಿಯ ಒಡನಾಡಿಯೂ ಆಗಿರುವ ಕಲಾವಿದೆ ಸಿರಿಯಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ. ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಯಿತು. ಸೆಪ್ಟೆಂಬರ್‌ ಅಂತ್ಯದಲ್ಲಿ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.

‘ಸಿರಿಯಜ್ಜಿಯ ಅಭಿಮಾನಿಗಳು ಸೇರಿ ಪ್ರತಿಷ್ಠಾನ ಸ್ಥಾಪಿಸಿಕೊಂಡಿದ್ದೇವೆ. ಕಾಡುಗೊಲ್ಲ ಬುಡಕಟ್ಟಿನ ಬಗ್ಗೆ ಅಧ್ಯಯನ ನಡೆಸುವ ವಿದ್ವಾಂಸರು ಹಾಗೂ ಬುಡಕಟ್ಟು ಸಮುದಾಯದ ಒಬ್ಬ ಕಲಾವಿದೆಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತದೆ. ಸಿರಿಯಜ್ಜಿ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುವುದು ಹಾಗೂ ಅವರ ನೆನಪಿನಲ್ಲಿ ಸ್ಮಾರಕ ಭವನ ಕಟ್ಟುವ ಉದ್ದೇಶವಿದೆ. ಕಾಡುಗೊಲ್ಲ ಬುಡಕಟ್ಟಿಗೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುವುದು, ಹಟ್ಟಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಪ್ರತಿಷ್ಠಾನ ಮಾಡಲಿದೆ’ ಎಂದು ಹೇಳಿದರು.

‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಅಗತ್ಯವಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಈವರೆಗೆ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡದ ಸೌಲಭ್ಯ ಸಿಕ್ಕಿಲ್ಲ. ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರೇ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿರಾಗಿರುವ ಕಾರಣಕ್ಕೆ ಮತ್ತೆ ನಿರೀಕ್ಷೆಗಳು ಹುಟ್ಟಿಕೊಂಡಿವೆ’ ಎಂದರು.

‘ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿತು. ಆದರೆ, ಈವರೆಗೆ ಈ ನಿಗಮ ಕಾರ್ಯಾರಂಭಗೊಂಡಿಲ್ಲ. ಅಧ್ಯಕ್ಷರ ನೇಮಕ ಮತ್ತು ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಬೆಳಗೆರೆ ಜಿ.ರಾಜಶೇಖರಯ್ಯ, ಉಪಾಧ್ಯಕ್ಷ ಜಿ.ವೆಂಕಟೇಶ್, ನಿರ್ದೇಶಕರಾದ ಡಾ.ಪ್ರೇಮಾ, ಡಾ.ಸಿ.ತಿಪ್ಪೇಸ್ವಾಮಿ, ನಿಸರ್ಗ ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT