ಶನಿವಾರ, ಮೇ 21, 2022
22 °C

ಮತಾಂತರ ನಿಷೇಧ ಕಾಯ್ದೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಮಾಜದ ಶಾಂತಿ ಕದಡುತ್ತಿರುವ ಕೋಮುವಾದಿ ಶಕ್ತಿಗಳ ಕೈಗೆ ನೀಡುತ್ತಿರುವ ಮತ್ತೊಂದು ಅಸ್ತ್ರ ಎಂದು ಭಾರತೀಯ ಕ್ರೈಸ್ತ ಸಂಘದ ದಕ್ಷಿಣ ಭಾರತೀಯ ವಿಭಾಗದ ಅಧ್ಯಕ್ಷ ರಾಜಶೇಖರ್‌ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾಯ್ದೆಯನ್ನು ಪ್ರತ್ಯೇಕವಾಗಿ ರೂಪಿಸುವ ಅಗತ್ಯ ರಾಜ್ಯದಲ್ಲಿ ಇಲ್ಲ. ಸಮಾಜದಲ್ಲಿರುವ ಶಾಂತಿ, ಸಮಾರಸ್ಯವನ್ನು ಕದಡಲು ದಾರಿ ಮಾಡಿಕೊಡುತ್ತದೆ. ಧರ್ಮಗಳ ನಡುವೆ ಗೋಡೆ ನಿರ್ಮಾಣವಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದ ಮೇಲೆ ಸುಳ್ಳು ದೂರುಗಳನ್ನು ದಾಖಲಿಸುವ ಹಾಗೂ ದಾಳಿಗಳನ್ನು ಪ್ರಚೋದಿಸಲಿದೆ’ ಎಂದು ಆರೋಪಿಸಿದರು.

‘ಕ್ರೈಸ್ತ ಸಮುದಾಯ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದೆ. ಈ ಸಮುದಾಯದ ಬಗೆಗೆ ಗೌರವ ತೋರಬೇಕಾದ ಸರ್ಕಾರವೇ ಅನುಮಾನದಿಂದ ನೋಡುವುದರಿಂದ ನೋವುಂಟಾಗುತ್ತಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ ವಿಚಾರಗಳು ಸಮುದಾಯದಲ್ಲಿ ಬೇಸರ ಮೂಡಿಸಿವೆ’ ಎಂದು ಹೇಳಿದರು.

ಭಾರತೀಯ ಕ್ರೈಸ್ತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್‌ ಚೇತನ್‌, ‘ಕ್ರೈಸ್ತರ ಮೇಲೆ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ಬಲವಂತದ ಮತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಇಲ್ಲ. ಸ್ವ ಇಚ್ಛೆಯಿಂದ ಧರ್ಮ ಪಾಲನೆ ಮಾಡುವ ಸಂವಿಧಾನಬದ್ಧವಾದ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೊಸ ಕಾಯ್ದೆಯಿಂದ ಇದಕ್ಕೆ ಧಕ್ಕೆ ಉಂಟಾಗುಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕ್ರೈಸ್ತ ಸಮುದಾಯ ಪ್ರತಿಯೊಬ್ಬರನ್ನು ಕರುಣೆಯಿಂದ ನೋಡುತ್ತದೆ. ನೆರವು ಕೇಳಿಬರುವ ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತೇವೆ. ಇದನ್ನು ಆಮಿಷಕ್ಕೆ ಹೋಲಿಕೆ ಮಾಡುವುದು ತಪ್ಪಾಗುತ್ತದೆ. ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲಾ ಫಾಸ್ಟರ್‌ ವೆಲ್‌ಫೇರ್‌ ಅಸೋಸಿಯೇಷನ್‌ ಗೌರವ ಅಧ್ಯಕ್ಷ ಸಾಲೊಮನ್‌, ಅಧ್ಯಕ್ಷ ಅಲೆಕ್ಸಾಂಡರ್‌, ಫಾದರ್‌ ಸಜಿ ಜಾರ್ಜ್‌, ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ಕಾರ್ಯದರ್ಶಿ ಎಸ್‌.ರಾಜು, ಕ್ರೈಸ್ತ ಸಂಘದ ಮುಖಂಡ ಪಿಂಟೊ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.