ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಅರ್ಚಕ ವೃತ್ತಿಗಾಗಿ ಏಕಾಂಗಿ ಧರಣಿ

22 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಕಾಯಂ ಹುದ್ದೆಗೆ ಪಟ್ಟು
Last Updated 28 ಸೆಪ್ಟೆಂಬರ್ 2020, 14:20 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಅರ್ಚಕ ವೃತ್ತಿ ನೀಡಬೇಕೆಂದು ಒತ್ತಾಯಿಸಿ ಅರ್ಚಕ ಪಿ.ಆರ್.ರವಿಕುಮಾರ್ ಒಳಮಠ ದೇವಾಲಯದ ಮುಂದೆ ಸೋಮವಾರ ಏಕಾಂಗಿಯಾಗಿ ಧರಣಿ ನಡೆಸಿದರು.

ಒಳಮಠ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಸಿ.ರಾಜಣ್ಣ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ, ತಮ್ಮ ಜತೆ ಕಾರ್ಯನಿರ್ವಹಿಸಲು ಅಣ್ಣನ ಮಗನಾದ ಪಿ.ಆರ್.ರವಿಕುಮಾರ್‌ ಅವರ ನೆರವನ್ನು ಪಡೆಯುತ್ತಿದ್ದರು. ಇವರಿಗೆ ದೇವಾಲಯ ವ್ಯವಸ್ಥಾಪನಾ ಮಂಡಳಿಯಿಂದ ಯಾವುದೇ ಆದೇಶ, ವೇತನವಾಗಲಿ, ಗೌರವಧನವನ್ನು ಸಹ ನೀಡಿಲ್ಲ. ರಾಜಣ್ಣ ಅವರು ನಿವೃತ್ತಿಯಾದ ನಂತರ ವ್ಯವಸ್ಥಾಪನ ಮಂಡಳಿ ರವಿಕುಮಾರ್ ಅವರನ್ನು ಹೊರತುಪಡಿಸಿ ಇಬ್ಬರು ಅರ್ಚಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿದೆ.

ಇದೇ ವಿಷಯವಾಗಿ ನಾಲ್ಕೈದು ಜನರು ಪೂಜಾರಿ ವೃತ್ತಿ ನೀಡಬೇಕೆಂದು ನ್ಯಾಯಲಯದಲ್ಲಿ ಧಾವೆ ಹೂಡಿದ್ದಾರೆ. ಸೋಮವಾರ ಏಕಾಏಕಿ ರವಿಕುಮಾರ್ ಅವರು ಒಳಮಠ ದೇವಾಲಯ ಪ್ರವೇಶಿಸಿ, ‘ನಾನು ಅರ್ಚಕನಾಗಿ ಕಾರ್ಯ ನಿರ್ವಹಿಸುತ್ತೇನೆ. ನನಗೆ ಅರ್ಚಕ ವೃತ್ತಿ ನೀಡಬೇಕು’ ಎಂದು ಒತ್ತಾಯಿಸಿ ದೇವಾಲಯದ ಮುಂಭಾಗ ಏಕಾಂಗಿಯಾಗಿ ಧರಣಿ ನಡೆಸಿದರು.

ಈ ಬಗ್ಗೆ ರವಿಕುಮಾರ್ ಮಾತನಾಡಿ, ‘ದೇವಾಲಯದಲ್ಲಿ 22 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದೇನೆ. ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ನನ್ನನ್ನು ದೇವಾಲಯದಿಂದ ಹೊರಹಾಕಿದ್ದಾರೆ. ನನಗೆ ಅರ್ಚಕ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ. ಕೂಲಿಗೆ ಹೋದರೂ ನನಗೆ ಕೂಲಿ ಕೆಲಸ ದೊರೆಯುತ್ತಿಲ್ಲ. ಹಾಗಾಗಿ ಅರ್ಚಕ ಹುದ್ದೆ ನೀಡಬೇಕು ಎಂದು ಸ್ಥಳಿಯ ಶಾಸಕರಿಂದ ಪತ್ರ ನೀಡಿಸಿದ್ದೇನೆ. ಹೀಗಿದ್ದರೂ ನನಗೆ ನ್ಯಾಯ ದೊರೆತಿಲ್ಲ. ನ್ಯಾಯ ದೊರೆಯುವವರೆಗೂ ಹೋರಾಡುತ್ತೇನೆ’ ಎಂದರು.

ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ್ ಮಾತನಾಡಿ, ‘ರವಿಕುಮಾರ್ ದೇವಾಲಯದ ಬಳಿ ಪ್ರತಿಭಟನೆ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಏಕಾಏಕಿ ಪ್ರತಿಭಟನೆಗೆ ಮುಂದಾಗಿರುವುದು ಅಕ್ಷಮ್ಯ. ಜತೆಗೆ ದೇವಾಲಯಕ್ಕೆ ಅರ್ಚಕರ ನೇಮಕಕ್ಕೆ ಧಾರ್ಮಿಕ ದತ್ತಿ ಇಲಾಖೆ ಯಾವುದೇ ಆದೇಶ ನೀಡಿಲ್ಲ. ಹಾಗಾಗಿ ಅವರನ್ನು ಅರ್ಚಕ ಹುದ್ದೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT