ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಶುರಾಂಪುರ: 6 ತಿಂಗಳಾದರೂ ಲಭ್ಯವಾಗದ ಆರೋಗ್ಯ ಕೇಂದ್ರ

ತಿಮ್ಮಣ್ಣನಾಯಕನ ಕೋಟೆ: ಉದ್ಘಾಟನೆ ವಿಚಾರವಾಗಿ ಮುಖಂಡರ ನಡುವೆ ಗೊಂದಲ
Last Updated 11 ಫೆಬ್ರುವರಿ 2023, 4:05 IST
ಅಕ್ಷರ ಗಾತ್ರ

ಪರಶುರಾಂಪುರ: ಹೋಬಳಿಯ ಗಡಿಭಾಗ ತಿಮ್ಮಣ್ಣನಾಯಕನ ಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಿ 6 ತಿಂಗಳು ಕಳೆದರೂ ಉದ್ಘಾಟನೆಯಾಗದಿರುವ ಬಗ್ಗೆ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರವು ತಿಮ್ಮಣ್ಣನಾಯಕನ ಕೋಟೆ, ಕೋನಿಗರಹಳ್ಳಿ, ಗೋಸಿಕೆರೆ, ಓಬಳಾಪುರ ಮತ್ತು ಮೇಲುಕೋಟೆ ಅಲ್ಲದೇ ಅಕ್ಕ–ಪಕ್ಕದ ದೊಡ್ಡಬೀರನಹಳ್ಳಿ, ಚಿಕ್ಕಚೆಲ್ಲೂರು ಬಸವೇಶ್ವರ ಕಾಲೊನಿ, ಶಾರದಾ ಕಾಲೊನಿ ಮುಂತಾದ ಹಳ್ಳಿಗಳ ಜನರಿಗೆ ಆಸರೆಯಾಗಿದೆ.

₹ 1.80 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಇಲ್ಲಿ ಮಹಿಳೆಯರಿಗೆ, ಪುರುಷರಿಗೆ ತಲಾ 10 ಹಾಸಿಗೆಗಳ ವ್ಯವಸ್ಥೆ ಇದೆ. ಗುತ್ತಿಗೆದಾರರು ಕಟ್ಟಡದ ಕಾಮಗಾರಿ ಮುಗಿಸಿ ಆರೋಗ್ಯ ಇಲಾಖೆಗೆ ವಹಿಸಿದ್ದಾರೆ. ಆದರೆ, ಕಟ್ಟಡದ ಕಾಮಗಾರಿ ಮುಗಿದು 6 ತಿಂಗಳುಗಳು ಕಳೆದರೂ ಜನರ ಸೇವೆಗೆ ನೀಡಿಲ್ಲ.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಪೈಕಿ ಕೆಲವರು ಶಾಸಕರನ್ನು ಕರೆಯಿಸಿ ಉದ್ಘಾಟಿಸಿಬೇಕು ಎಂದರೆ, ಮತ್ತೆ ಕೆಲವರು ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಅವರನ್ನು ಕರೆಯಿಸಿ ಉದ್ಘಾಟನೆ ಮಾಡಿಸಿಬೇಕು ಎಂದು ಹೇಳುತ್ತಿದ್ದಾರೆ. ಗೊಂದಲಗಳ ಕಾರಣ ಆಸ್ಪತ್ರೆ ಉದ್ಘಾಟನೆಯನ್ನು ಕಳೆದ ಡಿಸೆಂಬರ್‌ 22ಕ್ಕೆ ನಿಗದಿಪಡಿಸಲಾಗಿತ್ತು. ಆ ದಿನಾಂಕ ಮುಂದೆ ಹೋಗುತ್ತಲೇ ಇದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಅನಿಲ, ಗುಂಡ, ಬಸವರಾಜ, ಪ್ರಕಾಶ್‌ ದೂರಿದ್ದಾರೆ.

ಆಸ್ಪತ್ರೆ ನಿರ್ಮಾಣ ಕೆಲಸ 2020ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿ 2021ರ ಜುಲೈಗೆ ಮುಗಿಯಬೇಕಿತ್ತು. ಆದರೆ, ಕಾಮಗಾರಿ ಸ್ವಲ್ಪ ತಡವಾಗಿ ಮುಗಿದಿದೆ. ಆಸ್ಪತ್ರೆ ಉದ್ಘಾಟನೆ ನೆಪದಲ್ಲಿ ಜನರ ಉಪಯೋಗಕ್ಕೆ ನೀಡದಿರುವುದು ಬೇಸರ ತರಿಸಿದೆ. ಈಗಿರುವ ಕಟ್ಟಡ ಚಿಕ್ಕದಾಗಿದ್ದು ಹೆಚ್ಚು ರೋಗಿಗಳು ಬಂದರೆ ಕೂರಲೂ ಜಾಗವಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಕಟ್ಟಡದ ಕಾಮಗಾರಿ ಮುಗಿದಿದೆ. ಅಲ್ಲಿಗೆ ಆರೋಗ್ಯ ಕೇಂದ್ರವನ್ನು ವರ್ಗಾವಣೆ ಮಾಡೋಣವೆಂದರೆ ಕೆಲವರು ಉದ್ಘಾಟನೆ ಆಗುವವರೆಗೂ ಬೇಡ ಎಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ. ಆದಕಾರಣ ಹಳೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

****

ಗುತ್ತಿಗೆದಾರರು ಕಟ್ಟಡವನ್ನು ಇಲಾಖೆಗೆ ಹಸ್ತಂತಾರಿಸಿದ್ದಾರೆ. ಶೀಘ್ರದಲ್ಲಿ ಕಟ್ಟಡಕ್ಕೆ ಆರೋಗ್ಯ ಕೇಂದ್ರವನ್ನು ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು.

ಡಾ.ರಂಗನಾಥ, ಡಿಎಚ್‌ಒ, ಚಿತ್ರದುರ್ಗ

ಈಗಾಗಲೇ ಒಂದು ದಿನಾಂಕ ನಿಗದಿಯಾಗಿ ಮುಂದಕ್ಕೆ ಹೋಗಿದೆ. ಶಾಸಕರ ಜೊತೆ ಮಾತನಾಡಿ ಅತಿ ಶೀಘ್ರದಲ್ಲಿ ಉದ್ಘಾಟನೆಯ ಹೊಸ ದಿನಾಂಕ ನಿಗದಿಪಡಿಸುತ್ತೇವೆ.

ಪದ್ಮಾ ಬಸವರಾಜ್, ತಿಮ್ಮಣ್ಣನಾಯಕನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT