ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶ್ರೀರಾಮುಲು

59 ಕೆರೆಗಳ ಪೈಪ್‍ಲೈನ್ ಕಾಮಗಾರಿಗೆ ಭೂಮಿಪೂಜೆ
Last Updated 3 ಆಗಸ್ಟ್ 2020, 12:49 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ಮೊಳಕಾಲ್ಮುರು ಅನೇಕ ವರ್ಷಗಳಿಂದ ಹಿಂದುಳಿದ ಕ್ಷೇತ್ರವೆಂದು ಹಣೆಪಟ್ಟಿಯನ್ನು ಕಟ್ಟಿಕೊಂಡಿತ್ತು. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದೇನೆ. ಪಕ್ಷಭೇದವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಹೇಳಿದರು.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯಲ್ಲಿ ಸೋಮವಾರ 59 ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಈ ಭಾಗದ ರೈತರು ಹಲವು ದಶಕಗಳಿಂದ ನೀರಿನ ಬವಣೆ ಅನುಭವಿಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2008 ರಲ್ಲೇ ಭದ್ರಾಮೇಲ್ದಂಡೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅನುದಾನ ಮಂಜೂರು ಮಾಡಿದ್ದರು.ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ₹ 538 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಪೈಪ್‍ಲೈನ್ ಕಾಮಗಾರಿಗೆ ಫೆಬ್ರುವರಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. 2 ವರ್ಷದಲ್ಲಿ ಪೈಪ್‍ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಕ್ಷೇತ್ರದಾದ್ಯಂತ ₹ 200 ಕೋಟಿಗಳ ಕಾಮಗಾರಿಗಳು ನಡೆಯುತ್ತಿವೆ. ಜವಳಿ ಪಾರ್ಕ್ ನಿರ್ಮಾಣಕ್ಕಾಗಿ 30 ಎಕರೆ ಜಮೀನು ಮೀಸಲಿರಿಸಿದೆ. ದೇವಸಮುದ್ರ ಹೋಬಳಿಯಲ್ಲಿ ತೋಟಗಾರಿಕೆ ಚಟುವಟಿಕೆಗೆ 211 ಎಕರೆ ಜಮಿನು ಮಂಜೂರಾತಿಯಾಗಿದೆ. ಮೊಳಕಾಲ್ಮುರು ಪಟ್ಟಣದಲ್ಲಿ ಬೀದಿ ದೀಪಗಳ ಅಲಂಕಾರ ಸೇರಿ ಅಭಿವೃದ್ಧಿ ಕಾಮಗಾರಿಗೆ ₹ 30 ಕೋಟಿ ವೆಚ್ಚ ಮಾಡಲಾಗುವುದು. ಮೈಲನಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಿಸಲಾಗುವುದು. ಇದರಿಂದ ಸಾವಿರಾರು ರೈತರ ಕೊಳವೆಬಾವಿಗಳು ಮರುಪೂರಣಗೊಳ್ಳಲಿವೆ’ ಎಂದರು.

ನಾಯಕನಹಟ್ಟಿಯಲ್ಲಿ ಶೀಘ್ರ ಪಾಲಿಟೆಕ್ನಿಕ್ ಕಾಲೇಜು, ಪದವಿ ಪೂರ್ವ, ಪದವಿ ಕಾಲೇಜು, ಹಾಸ್ಟೆಲ್, ಸುಸಜ್ಜಿತ ಬಸ್‍ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಡಿಸೆಂಬರ್ ಅಂತ್ಯಕ್ಕೆ ಕುಡಿಯುವ ನೀರು ಪೂರೈಕೆ

₹ 2,244 ಕೋಟಿ ವೆಚ್ಚದ ತುಂಗಾಭದ್ರಾ ಹಿನ್ನೀರು ಕುಡಿಯುವ ನೀರು ಸರಬರಾಜು ಯೋಜನೆ ಚಾಲನೆಯಲ್ಲಿದೆ. ಈಗಾಗಲೇ 606 ಕಿ.ಮೀ. ಪೈಪ್‍ಲೈನ್ ಕಾಮಗಾರಿ ಮುಗಿದಿದ್ದು, 141 ಕಿ.ಮೀ ಪೈಪ್‍ಲೈನ್ ಕಾಮಗಾರಿ ಬಾಕಿ ಉಳಿದಿದೆ. ಡಿಸೆಂಬರ್ ವೇಳೆಗೆ ಕ್ಷೇತ್ರದ ಪ್ರತಿಹಳ್ಳಿಗಳಿಗೂ24 ಗಂಟೆಯೂ ಕುಡಿಯುವ ನೀರು ಪೂರೈಸಲಾಗುವುದು’ ಎಂದರು.

ಒಂದು ತಿಂಗಳಲ್ಲಿ ಹಕ್ಕುಪತ್ರ ವಿತರಣೆ

‘ನಾಯಕನಹಟ್ಟಿ, ತಳಕು, ಮೊಳಕಾಲ್ಮುರು ಕಸಬಾ, ದೇವಸಮುದ್ರ ಹೋಬಳಿಗಳ ವ್ಯಾಪ್ತಿಯಲ್ಲಿ 30 ವರ್ಷಗಳಿಂದ ಸಾವಿರಾರು ರೈತರು ಸರ್ಕಾರಿ ಭೂಮಿ ಸಾಗುವಳಿಯಲ್ಲಿ ತೊಡಗಿದ್ದಾರೆ. ಅವರಿಗೆ ಹಕ್ಕುಪತ್ರ ವಿತರಿಸಲು ನೂತನ ಬಗರ್‌ಹುಕುಂ ಸಮಿತಿಯನ್ನು ನೇಮಿಸಿದ್ದೇನೆ’ ಎಂದು ಹೇಳಿದರು.

ಬಿಟ್ಟುಹೋದ 20 ಕೆರೆಗಳಿಗಳಿಗೂ ನೀರು

ಮೊಳಕಾಲ್ಮುರು ಕ್ಷೇತ್ರದ ಪಕ್ಕುರ್ತಿ, ಗುಂಡ್ಲೂರು, ಓಬಳಾಪುರ, ಕಾಟಂದೇವರಕೋಟೆ, ಬಂಡೆತಿಮ್ಲಾಪುರ, ಚಿಕ್ಕೋಬನಹಳ್ಳಿ ಸೇರಿ 20 ಕೆರೆಗಳು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟುಹೋಗಿವೆ. ಕಾರಣ ಈ ಕೆರೆಗಳು ಎತ್ತರದ ಪ್ರದೇಶದಲ್ಲಿವೆ. ಶೀಘ್ರದಲ್ಲೇ ಎಲ್ಲ ಕೆರೆಗಳನ್ನು ಸರ್ಕಾರದ ಡಿಪಿಆರ್ ಪ್ರಕ್ರಿಯೆಗೆ ಒಳಪಡಿಸಿ ಪ್ರತ್ಯೇಕ ಅನುದಾನ ಮೀಸಲಿಟ್ಟು ನೀರು ಹರಿಸಲಾಗುವುದು. ಹಾಗಾಗಿ ಈ ಭಾಗದ ರೈತರು ಗೊಂದಲಕ್ಕೀಡಾಗಬಾರದು ಎಂದು ಶ್ರೀರಾಮುಲು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಪಿ. ಶಶಿರೇಖಾ, ಒ. ಮಂಜುನಾಥ್, ಎನ್. ಓಬಳೇಶ್, ಜಯಪ್ರತಿಭಾ, ಮಂಡಲ ಅಧ್ಯಕ್ಷರಾದ ಇ. ರಾಮರೆಡ್ಡಿ, ಪಿ.ಎಂ. ಮಂಜುನಾಥ್, ಮುಖಂಡರಾದ ಜಯಪಾಲಯ್ಯ, ಎಂ.ವೈ.ಟಿ. ಸ್ವಾಮಿ, ಎನ್. ಮಹಾಂತಣ್ಣ, ಪಿ. ಶಿವಣ್ಣ, ಡಿ.ಆರ್. ಬಸವರಾಜ, ಗೋವಿಂದ, ಸಿ.ಬಿ. ಮೋಹನ್, ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ನಂದಗಾವಿ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಡಿ. ಭೂತಪ್ಪ, ಡಾ. ಸಣ್ಣೋಬಣ್ಣ, ಪಿಎಸ್‍ಐ ಎಸ್. ರಘುನಾಥ್ ಇದ್ದರು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ರಭಸವಾಗಿ ಮಳೆ ಸುರಿಯಿತು. ಸಾರ್ವಜನಿಕರು ಕುರ್ಚಿಗಳನ್ನು ತಲೆಮೇಲೆ ಹೊತ್ತು ನಿಂತು ಶ್ರೀರಾಮುಲು ಭಾಷಣ ಆಲಿಸಿದರು. ಕೇವಲ 15 ನಿಮಿಷಕ್ಕೆ ಭಾಷಣ ಮುಕ್ತಾಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT