ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರೌಢಶಾಲೆ ಮರುಸ್ಥಳಾಂತರಕ್ಕೆ ವಿರೋಧ

ಶಾಲೆ ತೆರೆಯುವಂತೆ ವಿದ್ಯಾರ್ಥಿಗಳ ಒತ್ತಾಯ: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
Last Updated 3 ಜುಲೈ 2018, 17:27 IST
ಅಕ್ಷರ ಗಾತ್ರ

ಭರಮಸಾಗರ: ಉದ್ಘಾಟನೆಗೊಂಡ ಒಂದೇ ವಾರಕ್ಕೆ ಬಾಗಿಲು ಮುಚ್ಚಿದ ಸರ್ಕಾರಿ ಪ್ರೌಢಶಾಲೆಯ ಎದುರು ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಗಳವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಎಂದಿನಂತೆ ಸಮವಸ್ತ್ರ ಧರಿಸಿ ಶಾಲೆಗೆ ಬಂದ ಮಕ್ಕಳು ಬೀಗ ಹಾಕಿದ ಶಾಲಾ ಕೊಠಡಿಗಳ ಎದುರು ಕುಳಿತರು. ಶಾಲೆ ತೆರೆಯುವವರೆಗೂ ಮನೆಗೆ ಮರಳುವುದಿಲ್ಲ ಎಂದು ಪಟ್ಟು ಹಿಡಿದರು. ವಿದ್ಯಾರ್ಥಿಗಳ ಈ ಹೋರಾಟಕ್ಕೆ ಪೋಷಕರೂ ಕೈಜೋಡಿಸಿದರು. ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಮಕ್ಕಳು ಬೀದಿಯಲ್ಲಿರುವಂತೆ ಮಾಡಿದೆ. ಸೋಮವಾರ ಶಾಲೆಗೆ ಶಿಕ್ಷಕರೂ ಬಾರದೇ ಮಕ್ಕಳು ಶಾಲೆಯ ಅಂಗಳದಲ್ಲಿಯೇ ದಿನಪೂರ್ತಿ ಕಾಲ ಕಳೆಯಬೇಕಾಯಿತು ಎಂದು ಪೋಷಕರು ಅಳಲು ತೋಡಿಕೊಂಡರು.

ಶಿಕ್ಷಕರ ಬರುವಿಕೆಗಾಗಿ ಮಕ್ಕಳು ಕಾಯುತ್ತಿದ್ದು, ಯಾರೂ ಕೂಡ ಇತ್ತ ಸುಳಿದಿಲ್ಲ. ಡಿಡಿಪಿಐ, ಬಿಇಒ ಅವರೂ ಇತ್ತ ತಿರುಗಿ ನೋಡಿಲ್ಲ. ಮಕ್ಕಳನ್ನು ಅನಾಥರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ‘ಗ್ರಾಮಕ್ಕೆ ಮೊದಲು ಶಾಲೆಯನ್ನು ಮಂಜೂರು ಮಾಡಿ, ಉದ್ಗಾಟಿಸಿದ ನಂತರ ರದ್ದುಪಡಿಸಿರುವುದು ಬೇಸರದ ಸಂಗತಿಯಾಗಿದ್ದು, ಇಲಾಖೆಯೇ ಮಕ್ಕಳನ್ನು ಅತಂತ್ರಕ್ಕೆ ತಳ್ಳಿದೆ’ ಎಂದು ದೂರಿದರು.

ಶಾಲೆಯ ಆವರಣದಿಂದ ಪ್ರತಿಭಟನೆ ಆರಂಭಿಸಿ ಪೋಷಕರು ವಿನಾಯಕ ಚಿತ್ರಮಂದಿರ, ಬಿಳಿಚೋಡು ಮುಖ್ಯರಸ್ತೆ, ಮುಖ್ಯ ಸರ್ಕಲ್, ದೊಡ್ಡಪೇಟೆ, ಆಸ್ಪತ್ರೆ ರಸ್ತೆ, ಇಂದಿರಾಕಾಲೋನಿ ಮೂಲಕ ಜಾಥಾ ನಡೆಸಿ ಘೋಷಣೆ ಕೂಗುತ್ತಾ ನಾಡಕಚೇರಿ ಬಳಿ ಬಂದು ಪ್ರತಿಭಟಿಸಿ ನಾಡ ಕಚೇರಿ ಉಪತಹಶೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಶಿಧರ್ ಜಿಲ್ಲಾಧಿಕಾರಿಗಳಿಗೆ ತಕ್ಷಣ ರವಾನಿಸುವುದಾಗಿ ತಿಳಿಸಿದರು. ‘ಮಕ್ಕಳನ್ನು ಎರಡು ದಿನಗಳಿಂದ ಬೀದಿಯಲ್ಲಿರುವಂತೆ ಮಾಡಿರುವ ಶಿಕ್ಷಣ ಇಲಾಖೆ ಶಿಕ್ಷಣದ ಹಕ್ಕನ್ನು ಹತ್ತಿಕ್ಕುವಂತೆ ಮಾಡಿದೆ. ಇಲಾಖೆಯ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆ ಹಾಗೂ ಮಾನವ ಹಕ್ಕು ಸಂರಕ್ಷಣಾ ವೇದಿಕೆಗೂ ದೂರು ನೀಡುವುದಾಗಿ ಪೋಷಕರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT