ಸೋಮವಾರ, ಮೇ 17, 2021
21 °C
ಸಾರಿಗೆ ನೌಕರರ ವಿರುದ್ಧ ರೈತರ ಆಕ್ರೋಶ

ಮುಷ್ಕರ ಹಿಂಪಡೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೌಕರರು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳಬೇಕು ಎಂದು ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಆವರಣದಲ್ಲಿರುವ ರೈತ ಭವನದಿಂದ ಸೋಮವಾರ ಮೆರವಣಿಗೆ ಹೊರಟ ರೈತರು ಜಿಲ್ಲಾಧಿಕಾರಿಗೆ ಬಂದು ಮನವಿ ಸಲ್ಲಿಸಿದರು. ಮುಷ್ಕರದ ನಾಯಕತ್ವ ವಹಿಸಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರೇ ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು. ಚಂದ್ರಶೇಖರ್ ಬಗ್ಗೆಯೂ ಆಕ್ರೋಶ ವ್ಯಕ್ತವಾಯಿತು.

‘ಸಾರಿಗೆ ನೌಕರರ ಮುಷ್ಕರ ಸಮಾಜದ ಮೇಲೆ ಪರಿಣಾಮ ಬೀರಿದೆ. ಬಸ್‌ ವ್ಯವಸ್ಥೆಯನ್ನು ನಂಬಿದ್ದ ರೈತರು, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ತರಕಾರಿ, ಹಾಲು, ಹೂ, ಹಣ್ಣು ಸೇರಿ ಇತರ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ತೊಂದರೆಯಾಗಿದೆ. ಈ ಸತ್ಯವನ್ನು ಅರಿತು ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಆಗ್ರಹಿಸಿದರು.

‘ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಕೋವಿಡ್‌ ಹರಡುವುದನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ಶ್ರೀಕಂಠಮೂರ್ತಿ, ಬಸವರಾಜಪ್ಪ ಇದ್ದರು.

‘ಕೋಡಿಹಳ್ಳಿ ರೈತ ಸಂಘ ತೊರೆಯಲಿ’

ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ ಕೋಡಿಹಳ್ಳಿ ಚಂದ್ರಶೇಖರ್‌ ರೈತ ಸಂಘ ತೊರೆಯಲಿ. ಎರಡು ದೋಣಿಯಲ್ಲಿ ಕಾಲಿಟ್ಟು ಸಾಗಿದರೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಕಿಡಿಕಾರಿದರು.

‘ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ರೈತ ಸಂಘದ ಆಂತರಿಕ ಸಭೆಯಲ್ಲಿ ಚರ್ಚೆ ಆಗಿಲ್ಲ. ರೈತ ಸಂಘದ ಅಧ್ಯಕ್ಷರಾಗಿದ್ದ ಅವರು ಆಲೋಚನೆ ಮಾಡಬೇಕಿತ್ತು. ಬಾಹ್ಯ ಬೆಂಬಲ ನೀಡಿದ್ದರೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ಅವರೇ ಮುಷ್ಕರದ ನೇತೃತ್ವ ವಹಿಸಿದ್ದು ಖಂಡನೀಯ. ಸತ್ಯಾಗ್ರಹದ ಆಶಯಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ’ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು