ಮೊಳಕಾಲ್ಮುರು: ವಿದ್ಯುತ್ ಕೊರತೆ ನೆಪದಲ್ಲಿ ಜಿಲ್ಲೆಯ ತೋಟದ ಮನೆಗಳಿಗೆ ಸಂಜೆ ಮತ್ತು ರಾತ್ರಿ ವಿದ್ಯುತ್ ಕಡಿತ ಮಾಡುತ್ತಿರುವ ಬೆಸ್ಕಾಂ, ಸಮಸ್ಯೆ ಬಗೆಹರಿಸದಿದ್ದಲ್ಲಿ ತೋಟದ ಮನೆಗಳ ರೈತರಿಗೆ ದಯಾಮರಣವನ್ನು ಪಾಲಿಸಲು ಸಹಕಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.
ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ‘ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಬೆಸ್ಕಾಂ ಪ್ರತ್ಯೇಕವಾಗಿ ಕಾಣುತ್ತಿದೆ. ತೋಟದ ಮನೆ ರೈತರನ್ನು ಇನ್ನಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ರಾತ್ರಿ ವೇಳೆ ವಿದ್ಯುತ್ ನೀಡದ ಕಾರಣ ವಿದ್ಯಾಭ್ಯಾಸ, ಅಡುಗೆ, ತೋಟ ಕಾಯುವಿಕೆಗೆ ತೊಂದರೆಯಾಗಿದೆ ಎಂದರು.
ಜಿಲ್ಲಾಧಿಕಾರಿ ಅವರು ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಕಡಿತ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ. ಆದರೂ ಅಧಿಕಾರಿಗಳು ವಿದ್ಯುತ್ ಕಡಿತವನ್ನು ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ತೋಟದ ಮನೆಗಳ ಮಾಲೀಕರು ಕಾನೂನಿನ ಪ್ರಕಾರ ಹಣ ಪಾವತಿಸಿ ಆರ್‌ಆರ್ ಸಂಖ್ಯೆ ಪಡೆದಿದ್ದಾರೆ. ಈ ಮನೆಗಳನ್ನು ನಿರಂತರ ಜ್ಯೋತಿಗೂ ಸೇರಿಸಿಲ್ಲ, ಇತ್ತ ವಿದ್ಯುತ್ ನೀಡುತ್ತಿಲ್ಲ ಎಂದು ದೂರಿದರು.
ಪದೇ, ಪದೇ ವಿದ್ಯುತ್ ಕಡಿತ ಮಾಡುತ್ತಿರುವ ಪರಿಣಾಮ ನೀರುಣಿಸಲು ಆಗದೆ ಬೆಳೆಗಳು ಒಣಗುತ್ತಿವೆ. ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿನ ರೈತರು ಕೃಷಿಯನ್ನು ಕೊಳವೆಬಾವಿ ನಂಬಿಕೊಂಡು ಮಾಡುತ್ತಿದ್ದಾರೆ. ಬೆಸ್ಕಾಂ ಕಾರ್ಯ ವೈಖರಿಯಿಂದಾಗಿ ದಿಕ್ಕು ತೋಚದಂತಾಗಿದೆ ಎಂದು ಹೇಳಿದರು.
ಶೀರಸ್ತೇದಾರ್ ಏಳುಕೋಟಿ ಮನವಿ ಸ್ವೀಕರಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಮುಖಂಡರಾದ ಎಸ್.ಟಿ. ಚಂದ್ರಣ್ಣ, ಎಸ್. ಮಂಜುನಾಥ್, ಗುಂಡ್ಲೂರು ತಿಮ್ಮಪ್ಪ, ಚಂದ್ರಶೇಖರ ನಾಯ್ಕ, ಈರಣ್ಣ, ವಿಜಯಕುಮಾರ್, ಈಶ್ವರಪ್ಪ, ಬೋರಯ್ಯ, ದೊಡ್ಡಪಾಪಯ್ಯ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.