ಚಿತ್ರದುರ್ಗ: ಹಿಂದಿ ದಿನ ಆಚರಿಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಭಾಷಾ ವೈವಿದ್ಯತೆ ಹೊಂದಿದ ದೇಶದಲ್ಲಿ ಒಂದು ಭಾಷೆಗೆ ಪ್ರಾಮುಖ್ಯತೆ ನೀಡುವುದು ತಪ್ಪು. ಭಾರತದಲ್ಲಿ ಹಿಂದಿ ಕೂಡ ಒಂದು ಭಾಷೆಯಷ್ಟೇ. ಇದಕ್ಕೆ ವಿಶೇಷ ಪ್ರೋತ್ಸಾಹ ನೀಡುವುದ ಅಕ್ಷಮ್ಯ. ಜನರ ತೆರಿಗೆ ಹಣದಲ್ಲಿ ಇಂತಹ ದಿನಾಚರಣೆ ಮಾಡುವುದನ್ನು ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ಭಾಷೆಯ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಹಲವು ಉದ್ಯೋಗಗಳು ಉತ್ತರ ಭಾರತೀಯರಿಗೆ ಸೀಮಿತವಾಗಿವೆ. ಕನ್ನಡ ಹಾಗೂ ಇತರ ಪ್ರಾದೇಶಿಕ ಭಾಷೆಯಲ್ಲಿ ವ್ಯಾಸಂಗ ಮಾಡಿದವರನ್ನು ಕಡೆಗಣಿಸಲಾಗುತ್ತಿದೆ. ಕರ್ನಾಟಕಲ್ಲಿ ಉತ್ತರ ಭಾರತೀಯರ ಪ್ರಭಾವ ಹೆಚ್ಚಾಗುತ್ತಿದೆ. ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ ಭಾರತದಲ್ಲಿ ಹಲವು ಆಡಳಿತ ಭಾಷೆ ಹೊಂದಲು ಅವಕಾಶವಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಸೀಮಿತ ಆಗುವುದನ್ನು ತಪ್ಪಿಸಲು ಸಾಧ್ಯವಿದೆ. ಹಿಂದಿ ಶ್ರೇಷ್ಠ ಉಳಿದ ಭಾಷೆ ಕನಿಷ್ಠ ಎಂಬ ಮನಸ್ಥಿತಿಯನ್ನು ತೊಡೆದುಹಾಕುವ ಅಗತ್ಯವಿದೆ. ಬ್ಯಾಂಕು, ರೈಲ್ವೆ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ಅನುಭವಿಸುತ್ತಿದ್ದೇವೆ ಎಂದು ದೂರಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಮೇಶ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.